ಸಾಂಕ್ರಾಮಿಕ ರೋಗ; ಜಾಗೃತಿ ಮೂಡಿಸಿ
ಕೋಲಾರ: ಬೇಸಿಗೆ ಕಾಲದಲ್ಲಿ ಜನತೆಯನ್ನು ಕಾಡುವ ಡೆಂಘೀ, ಮಲೇರಿಯಾ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಜನತೆಯಲ್ಲಿ ಅರಿವು ಮೂಡಿಸಲು ಸಮರೋಪಾದಿಯಲ್ಲಿ ಕಾರ್ಯಕ್ರಮ ಹಾಕಿಕೊಳ್ಳಬೇಕೆಂದು ಜಿಪಂ ಸಿಇಒ ವಿನೋದ್‌ಪ್ರಿಯ ತಿಳಿಸಿದರು.
ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಬುಧವಾರ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಡೆಂಘೀ, ಚಿಕುನ್‌ಗುನ್ಯ ಮತ್ತು ಮಲೇರಿಯಾ ರೋಗಗಳ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಗಳನ್ನು ತೀವ್ರಗೊಳಿಸುವ ಸಲುವಾಗಿ ಸಮುದಾಯಕ್ಕೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಸಹಯೋಗದೊಂದಿಗೆ ಗ್ರಾಮೀಣ ಪ್ರದೇಶದ ಜನಪ್ರತಿನಿಧಿಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ರೋಗಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಯಾವುದೇ ಪ್ರಾಣಹಾನಿ ಸಂಭವಿಸದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿನ ಆರೋಗ್ಯ ಕೇಂದ್ರಗಳ ಮೂಲಕ ಜನರಿಗೆ ಅರಿವು ಮೂಡಿಸಬೇಕು, ಸ್ವಚ್ಛತೆ ಕಾಪಾಡಲು, ಪರಿಸರ ಹದೆಗೆಡದಂತೆ ಎಚ್ಚರವಹಿಸಲು ಹಾಗೂ ಶುದ್ಧವಾದ ನೀರು ಸೇವನೆ ವಿಚಾರವಾಗಿ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಫಯಾಜ್‌ಖಾನ್, ಮೀನುಗಾರಿಕೆ ಇಲಾಖೆಯ ಅಧಿಕಾರಿ ನಾಗರಾಜ್, ಶ್ರೀನಿವಾಸಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಮಹಮ್ಮದ್ಷ್‌ರೀಫ್,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಯಣ್ಣ ಇದ್ದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನಾರಾಯಣಸ್ವಾಮಿ, ಪ್ಲೋರೋಸಿಸ್‌ನಿಂದ ಆಗುವ ದುಷ್ಪರಿಣಾಮಗಳ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಲು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದ್ದು, ಜನತೆ
ಇದರ ಸದುಪಯೋಗ ಪಡೆದು ರೋಗಗಳಿಂದ ಮುಕ್ತಿಗೊಳ್ಳುವಂತೆ ತಿಳಿಸಿದರು.