ಎತ್ತಿನಹೊಳೆ ಶಂಕುಸ್ಥಾಪನೆಗೆ ಕಪ್ಪು ಪಟ್ಟಿ ಪ್ರದರ್ಶನ
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗುತ್ತಿರುವುದರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿರುವ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆಗೆ ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಸಿದ್ಧತೆ ಕೈಗೊಳ್ಳುತ್ತಿದ್ದು ಮತ್ತೊಂದೆಡೆ ಕಾರ್ಯಕ್ರಮದ ದಿಢೀರ್ ಆಯೋಜನೆಯ ನಿರ್ಧಾರ ಖಂಡಿಸಿ ಶಾಶ್ವತ ನೀರಾವರಿ ಹೋರಾಟಗಾರರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ನಗರದ ಸಿಟಿಜನ್ ಕ್ಲಬ್‌ನಲ್ಲಿ ತುರ್ತುಸಭೆ ಕರೆದು ಚರ್ಚಿಸಿದ ನೀರಾವರಿ ಹೋರಾಟಗಾರರು ಮಾ.3 ರಂದು ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಡೆಯಲಿರುವ ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಯಲು ಸೀಮೆ ಜಿಲ್ಲೆಗಳಲ್ಲಿ ಡಾ. ಪರಮಶಿವಯ್ಯನವರ ವರದಿ ಜಾರಿಗೊಳಿಸಬೇಕೆಂದು ಕಳೆದ ಒಂದೂವರೆ ದಶಕದಿಂದ ಹೋರಾಟ ನಡೆಸಿಕೊಂಡು ಬಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದು ಪ್ರತಿ ಬಾರಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಡಾ. ಪರಮಶಿವಯ್ಯನವರ ವರದಿಯನ್ನು ಅನುಷ್ಠಾನಗೊಳಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಆದರೆ, ಇದೀಗ ಬಯಲು ಸೀಮೆ ಜಿಲ್ಲೆಯ ಜನರೊಂದಿಗೆ ಚರ್ಚೆ ನಡೆಸಿ ಅಭಿಪ್ರಾಯ ತಿಳಿದುಕೊಳ್ಳದೇ ಏಕಾಏಕಿ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಾ. ಪರಮಶಿವಯ್ಯನವರ ವರದಿ ಜಾರಿಯಿಂದ ಬಯಲು ಸೀಮೆಯ ಜಿಲ್ಲೆಗಳಿಗೆ 200 ಟಿಎಂಸಿ ನೀರು ಲಭ್ಯವಾಗಲಿದ್ದು ಕೃಷಿ ಚಟುವಟಿಕೆಗಳಲ್ಲಿ ಬಳಕೆ ಮಾಡಿಕೊಳ್ಳುವುದಲ್ಲದೇ ಕುಡಿಯುವ ಸಲುವಾಗಿಯೂ ಸರಬರಾಜು ಮಾಡಬಹುದು. ಆದರೆ, ಎತ್ತಿನಹೊಳೆ ಯೋಜನೆಯಿಂದ 23 ಟಿಎಂಸಿ ನೀರನ್ನು ನೀಡಲಾಗುತ್ತದೆ ಎಂದೇಳಲಾಗುತ್ತಿದೆಯಾದರೂ ಅಷ್ಟು ಪ್ರಮಾಣದಲ್ಲಿ ನೀರು ಸಿಗುವುದಿಲ್ಲ ಎಂಬ ಅನುಮಾನ ಈ ಭಾಗದ ಜನರನ್ನು ಕಾಡುತ್ತಿದೆ. ಹೀಗಿರುವಾಗ ಕೋಟ್ಯಂತರ ರು. ವೆಚ್ಚ ಮಾಡಿ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ. ಪ್ರಮುಖವಾಗಿ ಕಳೆದ ನಾಲ್ಕೂವರೆ ವರ್ಷದಿಂದ ನಿರ್ಲಕ್ಷ್ಯ ವಹಿಸಿ ಇದೀಗ ಮುಂದೆ ಲೋಕಸಭಾ ಚುನಾವಣೆ ನಡೆಯುವುದರಿಂದ ಯೋಜನೆಗೆ ತರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಸ್ವಾರ್ಥ ರಾಜಕಾರಣ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಅನುಮೋದನೆ ನೀಡಿದ್ದರೂ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿಲ್ಲ. ಅಲ್ಲದೇ ಈ ಯೋಜನೆಯ ಬಗ್ಗೆ ಜನರಲ್ಲಿನ ಗೊಂದಲವನ್ನು ಬಗೆಹರಿಸಿಲ್ಲ. ಕೇವಲ ಚುನಾವಣೆ ಹಿನ್ನೆಲೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಮಾ.3 ರಂದು ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಮತ್ತು ಸಚಿವರು ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿದ್ದು, ಕಪ್ಪು ಪಟ್ಟಿಯನ್ನು ಪ್ರದರ್ಶನ ಮಾಡಿ ವಿರೋಧ ವ್ಯಕ್ತಪಡಿಸಬೇಕು. ಸದ್ಯಕ್ಕೆ ಸುಮ್ಮನಾಗಿ ಚುನಾವಣೆಯ ನಂತರ ಡಾ. ಪರಮಶಿವಯ್ಯ ವರದಿ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಬದ್ಧತೆಯನ್ನು ತೋರುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ, ಹೋರಾಟಗಾರರಾದ ನಾರಾಯಣಸ್ವಾಮಿ, ಅಶ್ವತ್ಥರೆಡ್ಡಿ, ಚಂದ್ರಶೇಖರ್, ಸು.ಧಾ. ವೆಂಕಟೇಶ್, ಹರೀಶ್, ಚಲಪತಿ, ಸೊಣ್ಣೇಗೌಡ, ಬೈರೇಗೌಡ, ಶ್ರೀನಿವಾಸ್, ಹನುಮೇಗೌಡ, ಲಕ್ಷ್ಮೀನಾರಾಯಣರೆಡ್ಡಿ, ಸಿ.ಡಿ. ಗಂಗುಲಪ್ಪ, ಲಕ್ಷ್ಮೀನಾರಾಯಣ್, ಬಿ.ಎಚ್. ನರಸಿಂಹಪ್ಪ, ನಾರಾಯಣಸ್ವಾಮಿ, ಸುಷ್ಮಾ ಶ್ರೀನಿವಾಸ್, ರೇಣುಕಾ, ನಿರ್ಮಲ, ಮೋಹನ್ ಕುಮಾರ್ ಇದ್ದರು.