ಐದು ಮಂದಿ ಹೆದ್ದಾರಿ ಡಕಾಯಿತರ ಬಂಧನ
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಬೆದರಿಸಿ ಹಣವನ್ನು ವಸೂಲಿ ಮಾಡುತ್ತಿದ್ದ ಐವರು ಡಕಾಯಿತರನ್ನು ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಅಂಗಟ್ಟ ಗಂಗಾಧರ್, ಬಿಜ್ರೇನಹಳ್ಳಿಯ ಮಣಿಕಂಠ ಮತ್ತು ಮಂಜುನಾಥ್, ಬಾಗಲೂರಿನ ಚಾಕಲೇಟ್ ರಮೇಶ್, ದೊಡ್ಡವಲ್ಲಭಿಯ ರವಿ ಎಂದು ಗುರುತಿಸಲಾಗಿದೆ.
ಆರೋಪಿಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳನ್ನು ಪ್ರಯಾಣಿಕರ ಸೋಗಿನಲ್ಲಿ ಅಡ್ಟಗಟ್ಟುತ್ತಿದ್ದರು. ಆ ನಂತರ ವಾಹನ ಸವಾರರ ಬಳಿಯಿದ್ದ ಹಣ ಮತ್ತು ಮೊಬೈಲ್‌ಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದರು. ಪ್ರಮುಖವಾಗಿ ಅವಾಚ್ಯ ಶಬ್ದಗಳಿಂದ ಮಾರಕವಾಗಿ ಹಲ್ಲೆ ನಡೆಸಿ ಜನರು ಭಯ ಬಿದ್ದು ಓಡಿ ಹೋಗುವಂತೆ ಮಾಡುವ ಮೂಲಕ ಭಯದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದರು ಎನ್ನಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ದಿವ್ಯ ಗೋಪಿನಾಥ್, ಕಳೆದ ಡಿ.30 ರಂದು ನಗರದ ಹೊರ ವಲಯದ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ತಾಲೂಕಿನ ಮಂಡಿಕಲ್‌ನಿಂದ ಬೆಂಗಳೂರಿಗೆ ಗ್ರಾನೈಟು ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದಿದ್ದ ಆರೋಪಿಗಳು ವಾಹನದಲ್ಲಿದವರನ್ನು ಬೆದರಿಸಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಲಕ ಲೋಕೇಶ್ ಅವರ ಕೂದಲುಗಳನ್ನಿಡಿದು ತೀವ್ರವಾಗಿ ಹಲ್ಲೆ ನಡೆಸಿದ್ದು ಅವರ ಬಳಿಯಿದ್ದ 18,450 ರೂಗಳನ್ನು ಮತ್ತು ಮೊಬೈಲ್‌ಗಳನ್ನು ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತೀವ್ರ ಕಾರ್ಯಾಚರಣೆ ನಡೆಸಿದ ಡಿವೈಎಸ್‌ಪಿ ಚಿನ್ನಸ್ವಾಮಿ, ವೃತ್ತ ನಿರೀಕ್ಷಕ ಬಾಲಾಜಿಸಿಂಗ್, ಪಿಎಸ್ ಐ ಶ್ರೀನಿವಾಸ್, ಸಿಬ್ಬಂದಿ ವೆಂಕಟೇಶ್, ಆನಂದ್, ಶಿವಪ್ಪ ಬ್ಯಾಕೋಡ್, ಪೆಂಚಾಲಪ್ಪ, ಬಿ.ನಾರಾಯಣಪ್ಪರವರನ್ನೊಳಗೊಂಡ ಪೊಲೀಸರ ತಂಡ ಇದೀಗ ಆರೋಪಿಗಳನ್ನು ಬಂಧಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸೂಕ್ತ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಬಹುಮಾನ ನೀಡುವುದಾಗಿ ಘೋಷಿಸಿದರು. ಬಂಧಿತ ಆರೋಪಿಗಳು ಇನ್ನೂ ಮೂರು ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಸವಾರರಿಂದ ಹಣವನ್ನು ಸುಲಿಗೆ ಮಾಡಿರುವ ಬಗ್ಗೆಯೂ ತಿಳಿದು ಬಂದಿದೆ ಎಂದು ತಿಳಿಸಿದರು.