ಮನಗೆದ್ದ ಮಹೇಶ
ಪಾ.ಶ್ರೀ. ಅನಂತರಾಮ್
ಕನ್ನಡಪ್ರಭ ವಾರ್ತೆ, ಕೋಲಾರ, ಫೆ.27
ಮಹಾಶಿವರಾತ್ರಿ ಪ್ರಯುಕ್ತ ಚಿನ್ನದ ನಾಡಾದ ಕೆಜಿಎಫ್ನಲ್ಲಿ ಆರ್ಯ ವೈಶ್ಯ ಮಂಡಳಿಯವರು ಹಮ್ಮಿಕೂಂಡಿದ್ದ ಬಿಲ್ವ ಪ್ರಿಯ ಮತ್ತು ಅಭಿಷೇಕ ಪ್ರಿಯನಾದ ಶಿವನ ದರ್ಶನ ಅಮೋಘವಾಗಿತ್ತು.
ಲೋಕಕಲ್ಯಾಣಕ್ಕಾಗಿ ಆರ್ಯ ವೈಶ್ಯ ಮಂಡಳಿಯ ಮಹಿಳಾ ಮಣಿಗಳು ದೃಢ ಸಂಕಲ್ಪ ಹಾಗೂ ಸ್ಪಷ್ಟಗುರಿಯೊಂದಿಗೆ ಸುಮಾರು ಎರಡುವರೆ ತಿಂಗಳ ಪರಿಶ್ರಮದಿಂದ ತಯಾರಿಸಿರುವ ಲಕ್ಷ ವಿವಿಧ ಅಕಾರಗಳ ಶಿವ ಲಿಂಗಗಳನ್ನು ಭಕ್ತರ ದರ್ಶನಕ್ಕಾಗಿ ಆರ್ಯ ವೈಶ್ಯ ಮಂಡಳಿಗೆ ಸೇರಿದ ಕಲ್ಯಾಣ ಮಂಟಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಎರಡು ದಿನಗಳ ಕಾಲ ಶಿವ ಲಿಂಗ ದರ್ಶನದ ಬಳಿಕ ಶನಿವಾರ(ಮಾ.1) ಶಿವ ಲಿಂಗಗಳನ್ನು ಟಿ. ನರಸೀಪುರ, ತಲಕಾಡು, ಶ್ರೀರಂಗಪಟ್ಟಣದ ನಿಮಿಷಾಂಭ ಸನ್ನಿದಿ, ತ್ರಿವೇಣಿ ಸಂಗಮ, ನಂಜನಗೂಡು ಶ್ರೀಕ್ಷೇತ್ರದ ಕಪಿಲೆಯಲ್ಲಿ ಹಾಗೂ ರಾಮೇಶ್ವರ, ಕಾಶಿ, ಧರ್ಮಸ್ಥಳದ ತಪೋನದಿಗಳಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲಾಗುವುದು.
ಇದಕ್ಕಾಗಿ ಸಮಿತಿಯ ನೂರು ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗಿದೆ. ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎ. ಚಂದ್ರಶೇಖರ್, ಕಾರ್ಯದರ್ಶಿ ನರಸಿಂಹಗುಪ್ತ, ಖಜಾಂಚಿ ಶ್ರೀಧರ್, ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀಬಾಯಿ, ಕಾರ್ಯದರ್ಶಿ ವಾಣಿ ಶ್ರೀಧರ್, ಉಪಾಧ್ಯಕ್ಷೆ ಉಮಾ ರಮೇಶ್, ಖಜಾಂಚಿ ಉಷಾರಾಣಿ ಹಾಗೂ ಶ್ರೀ ಕನ್ನಿಕಾಪರಮೇಸ್ವರಿ ಟೆಂಪಲ್ ಫೆಸ್ಟ್ ಅಧ್ಯಕ್ಷ ಬಿ.ಎ. ಕೋದಂಡರಾಮಶೆಟ್ಟಿ ನೇತೃತ್ವದಲ್ಲಿ ಈ ಬಾರಿಯ ಮಹಾಶಿವರಾತ್ರಿ ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಗುತ್ತಿದ್ದು ಗುರುವಾರ ಬೆಳಿಗ್ಗೆ 8 ಗಂಟೆಯಿಂದಲೇ ವಿಶೇಷ ಪೂಜೆಗಳೊಂದಿಗೆ ಲಕ್ಷ ಲಿಂಗ ಪ್ರಾಣ ಪ್ರತಿಷ್ಠಾಪನೆ ನೆರವೇರಿತು.
ಫೆ.28ರಂದು ಬೆಳಿಗ್ಗೆ 9 ಗಂಟೆಗೆ ಮಹಾ ರುದ್ರಹೋಮ ಏರ್ಪಡಿಸಲಾಗಿದ್ದು ಮಧ್ಯಾಹ್ನ 12.30ಕ್ಕೆ ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ. ವಿಶ್ವೇಶ್ವರತೀರ್ಥ ಸ್ವಾಮೀಜಿ ಮಹಾಪೂರ್ಣಾವತಿಯಲ್ಲಿ ಪಾಲ್ಗೊಂಡು ಅನುಗ್ರಹ ಭಾಷಣ ಮಾಡಲಿದ್ದಾರೆ.
ನದಿಗಳ ನೀರು ಬಳಕೆ: ಈ ಲಿಂಗಗಳನ್ನು ತಯಾರಿಸಲು ಗಂಗೆ, ಕಾವೇರಿ ಮುಂತಾದ ನದಿಗಳ ನೀರು ಬಳಕೆ ಮಾಡಿಕೊಳ್ಳಲಾಗಿದೆ, ಜೇಡಿ ಮಣ್ಣು ಮಾತ್ರವಲ್ಲದೆ ಹರಿಶಿನ, ಕುಂಕುಮ, ವಿಭೂತಿ ಹಾಗೂ ಹೂತ್ತದ ಮಣ್ಣನ್ನು ಉಪಯೋಗಿಸಲಾಗಿದೆ. ಪ್ರತಿದಿನ 4 ರಿಂದ 5 ಗಂಟೆಗಳ ಕಾಲ ಲಿಂಗಗಳ ತಯಾರಿಕೆಗಾಗಿ ನಮ್ಮ ಸದಸ್ಯರು ಶ್ರಮಿಸಿದ್ದಾರೆಂದು ಹೇಳಿದರು.
ಪ್ರಾರಂಭದಲ್ಲಿ ಒಂದು ಲಿಂಗ ತಯಾರಿಸಲು 5 ನಿಮಿಷ ಹಿಡಿಯುತ್ತಿತ್ತು, ಕಾಲ ಕ್ರಮೇಣ ಒಂದು ನಿಮಿಷಕ್ಕೆ 3 ರಿಂದ 5 ಲಿಂಗ ಸಿದ್ಧಪಡಿಸಿದ್ದೇವೆ, ಸುಮಾರು 35ಕ್ಕೂ ಹೆಚ್ಚು ಮಹಿಳೆಯರು ಸಕ್ರಿಯವಾಗಿ ಲಿಂಗಗಳ ತಯಾರಿಕೆ ಕಾರ್ಯದಲ್ಲಿ ತೋಡಗಿದ್ದರು, ಕೆಲಮೊಂದು ಕೆಲಸಕ್ಕೆ ಮಾತ್ರ ಪುರುಷರ ಸಹಾಯ ಪಡೆದಿದ್ದೇವೆಂದು ತಿಳಿಸಿದರು. ಕಳೆದ ಸಂಕ್ರಾಂತಿ ಹಬ್ಬದ ದಿನ 108 ಗೋಪೂಜೆ ಮಾಡಿದ್ದು ಇದಕ್ಕೆ ದೊರೆತ ಪ್ರೋತ್ಸಾಹ, ಸಹಕಾರದಿಂದ ಲಕ್ಷ ಲಿಂಗ ದರ್ಶನಕ್ಕೆ ಧೈರ್ಯ ಮಾಡಲು ಸಾಧ್ಯವಾಯಿತು ಎಂದರು.
ಎರಡು ದಿನಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಭಕ್ತರು ಶಿವಲಿಂಗ ದರ್ಶನ ಮಾಡುವ ನಿರೀಕ್ಷೆ ಇದೆ. ಒಂದು ಇಂಚಿನಿಂದ ಹಿಡಿದು 3 ಅಡಿ ಎತ್ತರ ವಿವಿಧ ಅಕಾರಗಳ ಲಿಂಗಗಳು ಇದೆ, ನವದಾನ್ಯಗಳ ಲಿಂಗ, ಸ್ವಸ್ತಿಕ್ ಹಾಗೂ ಓಂಕಾರರೂಪದ ಲಿಂಗಗಳನ್ನು ನೋಡುವುದು ಭಕ್ತರ ಸೌಭಾಗ್ಯವಾಗಿದ್ದು, ದೇವರ ಅನುಗ್ರಹವಿದ್ದರೆ ಮುಂದಿನ ವರ್ಷ ಮಹಾಶಿವರಾತ್ರಿಯನ್ನು ಮತ್ತಷ್ಟು ವಿಶಿಷ್ಠತೆ, ವಿಜೃಂಭಣೆಯಿಂದ ಆಚರಿಸುವುದಾಗಿ ತಿಳಿಸಿದರು.
ಕಳೆದ ವರ್ಷ ಸಂಕಲ್ಪ
ಲಕ್ಷ ಲಿಂಗ ದರ್ಶನದ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಆರ್ಯ ವೈಶ್ಯ ಮಹಿಳಾ ಮಂಡಳಿಯ ಕಾರ್ಯದರ್ಶಿ ವಾಣಿ ಶ್ರೀಧರ್, ಕಳೆದ ವರ್ಷ 11-12-13ರಂದು ಕೆಜಿಎಫ್ನಲ್ಲಿ ಶಿವರಾತ್ರಿ ಪ್ರಯುಕ್ತ ಲಕ್ಷ ಲಿಂಗ ಪ್ರತಿಷ್ಠಾಪನೆ ಮಾಡಬೇಕೆಂದು ನಾವುಗಳು ಸಂಕಲ್ಪ ಮಾಡಿದ್ದೆವು. ಇದಕ್ಕೆ ತಲಕಾಡಿನಲ್ಲಿ ಕಂಡ ಶಿವಲಿಂಗಗಳೇ ಸ್ಫೂರ್ತಿ. ಮಹಿಳಾ ಮಂಡಳಿಯ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರೂಟ್ಟಿಗೆ ಚರ್ಚಿಸಿ ಲಿಂಗಗಳ ತಯಾರಿಕೆ ಪ್ರಾರಂಭಿಸಿ 2014ರ ಜನವರಿ 21ಕ್ಕೆ ಕೇವಲ 9 ಸಾವಿರ ಲಿಂಗಗಳನ್ನು ಮಾಡಿ, ಗುರಿ ತಲುಪಲು ಕಷ್ಟವಾಗುತ್ತಿರುವುದನ್ನು ಅರಿತು ನಮ್ಮ ಸಮಾಜಕ್ಕೆ ಸೇರಿದ 135 ಮನೆಗಳಿಗೆ ಲಿಂಗ ಸಿದ್ಧಪಡಿಸಿಕೊಡುವ ಜವಾಬ್ದಾರಿ ವಹಿಸಿ ಇದಕ್ಕಾಗಿ 3 ವರ್ಷದ ಮಗುವಿನಿಂದ 60 ವರ್ಷ ಮೇಲ್ಪಟ್ಟ ವಯೋವೃದ್ಧರ ಸಹಾಯ ಪಡೆದು ಒಂದು ತಿಂಗಳಲ್ಲಿ 1 ಲಕ್ಷ ಲಿಂಗಗಳನ್ನು ತಯಾರಿಸಲಾಯಿತು ಎಂದು ತಿಳಿಸಿದರು. ಫೆ.26ರ ಸಂಜೆಯತನಕ 1.60 ಲಕ್ಷ ಲಿಂಗಗಳನ್ನು ಪಡೆದುಕೊಳ್ಳಲಾಗಿತ್ತು. ನಿನ್ನೆ ಬೆಳಿಗ್ಗೆಯಿಂದಲೇ ಲಿಂಗಗಳನ್ನು ಜೋಡಣೆ ಮಾಡಲಾರಂಭಿಸಲಾಯಿತು. ಫೆ.27ರ ಬೆಳಿಗ್ಗೆ ಹೊತ್ತಿಗೆ 2 ಲಕ್ಷ ಲಿಂಗಗಳನ್ನು ಕಲ್ಯಾಣ ಮಂಟಪದ ವಿವಿಧ ಕಡೆ ವಿನ್ಯಾಸಗೊಳಿಸಲಾಗಿದೆ, ನಾವು ಒಂದು ಲಕ್ಷ ಲಿಂಗ ದರ್ಶನ ಮಾಡಬೇಕೆಂಬ ಗುರಿ ಇತ್ತು. ಆದರೆ, ಶಿವನ ಕೃಪೆಯಿಂದಾಗಿ 2 ಲಕ್ಷ ದಾಟಿದೆ ಎಂದು ವಾಣಿ ಶ್ರೀಧರ್ ಸಂಸತ ವ್ಯಕ್ತಪಡಿಸಿದರು.