ಮಾಲೂರಿನಲ್ಲಿ ಮಹಾ ಶಿವರಾತ್ರಿ
ಮಾಲೂರು: ಮಹಾ ಶಿವರಾತ್ರಿ ಪ್ರಯುಕ್ತ ಪಟ್ಟಣದ ವಿವಿಧ ದೇವಾಲಯಗಳಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಶಂಕರನಾರಾಯಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗಿನಿಂದಲ್ಲೇ ಭಕ್ತರು ತಂಡೋಪತಂಡವಾಗಿ ಬಂದು ಸ್ವಾಮಿಯ ದರ್ಶನ ಪಡೆದರು. ಸಂಜೆ ಸೌಂದರ್ಯ ಲಹರಿ ಮಹಿಳಾ ತಂಡದವರಿಂದ ಲಲಿತಾ ಸಹಸ್ರನಾಮ ಪಠಿಸಲಾಯಿತು.ಶಿವರಾತ್ರಿ ಪ್ರಯುಕ್ತ ಸ್ವಾಮಿಗೆ ವಿಶೇಷ ವಾಗಿ ಪ್ರಧೋಕ್ಷ ಸೇವೆ ನಡೆಸಲಾಯಿತು. ರಾತ್ರಿ ಇಡೀ ಜಾಗರಣೆಗಾಗಿ ಭಜನೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಇದೇ ರೀತಿಯಲ್ಲಿ ಕೋಲಾರ ರಸ್ತೆಯಲ್ಲಿರುವ ಪಂಚಲಿಂಗೇಶ್ವರ ಸ್ವಾಮಿ ದೇವಾಲಯ, ಸುಬ್ರಮಣ್ಯಸ್ವಾಮಿ ದೇವಾಲಯ ಹಾಗೂ ಕುಂಬಾರ ಪೇಟೆಯಲ್ಲಿರುವ ಕುಂಭೇಶ್ವರ ದೇವಾಲಯದಲ್ಲಿ ವಿಶೇಷ ಪೊಜೆ ಏರ್ಪಡಿಸಲಾಗಿತ್ತು. ತಹಸೀಲ್ದಾರ್ ಕಚೇರಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಶಿರಡಿ ಸಾಯಿಬಾಬಾ ದೇವಾಲಯದ ಸ್ಥಳದಲ್ಲಿ ಮಹಾಶಿವರಾತ್ರಿ ಅಂಗವಾಗಿ ಸಾಯಿನಾಥರಿಗೆ ವಿಶೇಷ ಪೊಜೆ ಹಾಗೂ ಗುರುವಾರದ ಇಡೀ ರಾತ್ರಿ ಅಖಂಡ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಟ್ರಸ್ಟ್ನ ಶ್ರೀನಿವಾಸ್ ರೆಡ್ಡಿ, ನರಸಿಂಹ, ಮುನಿಕೃಷ್ಣಪ್ಪ, ಜೈ ಶಂಕರ್ ಇದ್ದರು.