ಶ್ರದ್ಧಾ ಭಕ್ತಿಯಿಂದ ಶಿವನಾಮ ಸ್ಮರಣೆ
ಕೋಲಾರ: ಮಹಾಶಿವರಾತ್ರಿಯ ಪ್ರಯುಕ್ತ ಕೋಲಾರ ಸೇರಿದಂತೆ ವಿವಿಧ ಕಡೆ ಸಾವಿರಾರು ಭಕ್ತರು ಶಿವಾಲಯಗಳಿಗೆ ಹೋಗಿ ದೇವರ ದರ್ಶನ ಪಡೆದರು.
ಶಿವ ಶಿವ ಎಂದರೆ ಭಯವಿಲ್ಲ...ಶಿವ ನಾಮಕೆ ಸಾಟಿ ಬೇರಿಲ್ಲ, ಓಂ ನಮ-ಶಿವಾಯ...ಎಂದು ಭಕ್ತರು ಶಿವನ ಸ್ಮರಣೆ ಮಾಡುವ ಮೂಲಕ ಮಹಾಶಿವರಾತ್ರಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು, ಕೋಲಾರ ನಗರದ ಕೋಟೆ ಪ್ರದೇಶದಲ್ಲಿನ ಪುರಾಣ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಶಿವನ ದರ್ಶನ ಪಡೆದರು, ದೇವಾಲಯದ ಗರ್ಭಗುಡಿಯ ಮುಂದಿನ ನಂದಿಗೆ ಹೆಂಗಸರು ದೀಪಾರಾಧನೆ ಮೂಲಕ ಹರಿಕೆ ತೀರಿಸಿದರು.
ದಕ್ಷಿಣ ಕಾಶೀ ಎಂದೇ ಪ್ರಸಿದ್ಧಿ ಹೊಂದಿರುವ ಅಂತರಗಂಗೆ ಬೆಟ್ಟದಲ್ಲಿನ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯದಲ್ಲೂ ಭಕ್ತರ ದಂಡು ಜೋರಾಗಿತ್ತು. ಕೋಲಾರ ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಭಕ್ತರು ಬೆಟ್ಟ ಹತ್ತಿ ದೇವರ ದರ್ಶನ ಪಡೆದರು.
ಅರಳೆ ಪೇಟೆಯ ಶ್ರೀ ನಂಜುಂಡೇಶ್ವರ ಸ್ವಾಮಿ, ಕಠಾರಿಪಾಳ್ಯದ ಕುಂಬಾರೇಶ್ವರ ಸ್ವಾಮಿ, ಕೆಇಬಿ ವಿದ್ಯಾ ಗಣಪತಿ ಗುಡಿ ಸೇರಿದಂತೆ ವಿವಿಧ ಕಡೆ ಭಕ್ತರ ಸಾಗರ ಕಂಡು ಬಂದಿತು. ನಗರದ ಗಲಲ್ಪೇಟೆಯಲ್ಲಿನ ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್ ಅವರ ಮನೆಯಲ್ಲಿ ಹಲವು ವರ್ಷಗಳಿಂದ ಮಹಾಶಿವರಾತ್ರಿಯನ್ನು ವಿಶಿಷ್‌ಠ ರೀತಿಯಲ್ಲಿ ಆಚರಿಸಲಾಗುತ್ತಿದ್ದು ಈ ಬಾರಿ 10,108 ಶಿವಲಿಂಗಗಳ ದರ್ಶನ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲೂ ಪ್ರತಿ ವರ್ಷದಂತೆ ಶಿವರಾತ್ರಿ ಆಚರಿಸಲಾಯಿತು. ನವದಾನ್ಯಗಳಿಂದ ಮತ್ತು ವಿವಿಧ ಪುಷ್ಪಗಳಿಂದ ತಯಾರಿಸಿದ್ದ ಜ್ಯೋರ್ತಿಲಿಂಗ ಭಕ್ತರ ಗಮನ ಸೆಳೆಯಿತು. ಇಲ್ಲಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಎಸ್ಪಿ ಡಾ. ರಾಮ್‌ನಿವಾಸ್ ಸಫೆಟ್ ಮಾತನಾಡಿ, ಭಾರತ ಮುಂದುವರೆಯುತ್ತಿರುವ ರಾಷ್ಟ್ರವಾಗಿದೆ. ನಾವು ಸರ್ಕಾರದ ಸೇವೆಯನ್ನು ದೇವರ ಸೇವೆಯೆಂದು ತಿಳಿದು ಪ್ರಾಮಾಣಿಕತೆಯಿಂದ ಸರ್ಕಾರಿ ಸೇವೆ ಜನ ಸೇವೆ ಮಾಡಬೇಕು. ಆಗ ದೇಶದ ಉನ್ನತಿ ಸಾದ್ಯವೆಂದು ತಿಳಿಸಿದರಲ್ಲದೆ, ಶಿವನ ಅನುಗ್ರಹಕ್ಕಾಗಿ ನಿಷ್ಠೆಯಿಂದ ಸಂಕಲ್ಪ ಮಾಡಬೇಕೆಂದು ತಿಳಿಸಿದರು. ಸಂಸ್ಥೆಯ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿ.ಕೆ. ಸರ್ವಮಂಗಳಾಜಿ ಮಾತನಾಡಿ, ಶಿವನ ಅವತರಣೆಯ ದಿವ್ಯ ಸಂದೇಶವನ್ನು ನೀಡಿದರು. ಸಿರಾ ಸೇವಾ ಕೇಂದ್ರದ ಪ್ರೊ.ಎಚ್. ಮಹೇಂದ್ರಪ್ಪ, ಸುಗಟೂರು ನಾರಾಯಣಸ್ವಾಮಿ, ಹೇಮ, ಸಾಹಿತಿ ಸುನಿಲ್, ನಂಜಪ್ಪ, ಗೋಪಿ, ಕೆಎಸ್‌ಆರ್ಟಿಸಿ ಬಾಲಕೃಷ್ಣ ಅವರನ್ನು ಅಭಿನಂದಿಸಲಾಯಿತು. ಆದ್ಯಾತ್ಮಿಕ ಕಲಾಸಂಗ್ರಹಾಲಯ ಮಾರ್ಗದರ್ಶಿ ಬಿ.ಕೆ. ನಾರಾಯಣಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು.
ಪತ್ರಕರ್ತ ಬಿ. ಸುರೇಶ್ ಇದ್ದರು. ಚಿನ್ಮಯ ವಿದ್ಯಾಲಯದ ನಿರೂಪಿಸಿದ ನೃತ್ಯ ಹಾಗೂ ಸುರಕ್ಷಿತ್ ಗಾನ ಕಲಾವೇದಿಕೆ ತಂಡದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು.