ಕಾರಿಗೆ ಆಕಸ್ಮಿಕ ಬೆಂಕಿ; ಬಾಲಕ ಸಾವು
ಬಂಗಾರಪೇಟೆ: ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರಸಿದ್ಧ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಲಿಂಗಗಳ ದರ್ಶನ ಮಾಡಿ ಮನೆಗೆ ತೆರಲುವಾಗ ಕಾರೊಂದು ಬೆಂಕಿಗೀಡಾಗಿ ಬಾಲಕನೊಬ್ಬ ಮೃತಪಟ್ಟು ಮತ್ತೊಬ್ಬ ತೀವ್ರ ಗಾಯಗೊಂಡಿರುವ ಘಟನೆ ಬೇತಮಂಗಲ ಠಾಣೆ ವ್ಯಾಪ್ತಿಯ ಬಡಮಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕು ಗೋಪಾಲಪುರ ಗ್ರಾಮದ ನರಸಿಂಹಪ್ಪ ಎಂಬುವರ ಮಗ ನಿತೀನ್ (7) ಎಂಬ ಬಾಲಕ ಬೆಂಕಿಯಲ್ಲಿ ಬೆಂದು ಹೋಗಿದ್ದು, ಕಾರಿನ ಚಾಲಕ ಶಿವಪ್ಪ ತೀವ್ರವಾಗಿ ಗಾಯಗೊಂಡು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾನೆ. ಮಾರುತಿ ಓಮಿನಿ ಕಾರಿನಲ್ಲಿ 10ಜನ ಬಂದು ದರ್ಶನ ಮಾಡಿ ಸ್ವಗ್ರಾಮಕ್ಕೆ ಹೋಗುತ್ತಿದ್ದಾಗ, ಬಡಮಾಕನಹಳ್ಳಿ ಗ್ರಾಮದ ಬಳಿ ಕಾರಿನ ಎಲ್ಪಿಜಿ ಮುಗಿದು ಹೋಗಿದ್ದು, ನಂತರ ಬೇತಮಂಗಲದಿಂದ ಪೆಟ್ರೋಲ್ ತರಸಿ ಕಾರು ಚಾಲನೆಯಾಗದಿದ್ದಾಗ ಎಲ್ಲರು ಸೇರಿ ತಳ್ಳುವಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿ ಸ್ಪೋಟಿಸಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರನ್ನು ತಳ್ಳುತ್ತಿದ್ದ ಎಲ್ಲರೂ ಚೆಲ್ಲಾಪಿಲ್ಲಿಯಾದರು. ಒಳಗೆ ಮಲಗಿದ್ದ ಬಾಲಕ ನಿತೀನ್ ಬೆಂಕಿಗೆ ಸಿಲುಕಿ ಸುಟ್ಟು ಕರಗಲಾಗಿದ್ದಾನೆ. ತಕ್ಷಣ ಅಗ್ನಿಶಾಮಕದಳ ವಾಹನ ಸಿಬ್ಬಂದಿ ಬಂದು ಬೆಂಕಿ ನಂದಿಸಿದರೂ ಆ ವೇಳೆಗಾಗಲೆ ಕಾರು ಸಂಪೂರ್ಣವಾಗಿ ಬೆಂಕಿಗೆ ಕರಗಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಸಹಾಯ ಮಾಡಲು ಮುಂದಾದರೂ ಪ್ರಯೋಜನವಾಗಿಲ್ಲ, ಬಾಲಕನ ಪ್ರಾಣ ಹಾರಿ ಹೋಗಿತ್ತು. ಮಗನನ್ನು ಕಳೆದುಕೊಂಡ ಬಾಲಕನ ಪೋಷಕರ ರೋಧಿಸುತ್ತಿದ್ದರು. ಬೇತಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.