ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಡಿವ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ

Rashmi Kasaragodu
Updated On : 1 Mar 2014, 1:01 am

ಕೋಲಾರ: ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಕ್ಷಿಪ್ರ ಪರಿಹಾರ ಕಲ್ಪಿಸಲಾಗುವುದೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಯು.ಟಿ. ಖಾದರ್, ಜಿಲ್ಲೆಯ ಶಾಸಕರು ಜಿಪಂ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಡನೆ ಸಭೆ ನಡೆಸಿ ನೀರಿನ ಸಮಸ್ಯೆಗೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಕೋಲಾರ ಜಿಪಂ ವ್ಯಾಪ್ತಿಯಲ್ಲಿ ಈಗಾಗಲೇ ಕೊರೆದಿರುವ 300 ಕೊಳವೆಬಾವಿಗಳ ಪೈಕಿ 223ಸಫಲವಾಗಿದ್ದು, ಅವುಗಳ ಬಿಲ್ಲುಗಳನ್ನು ಪಾವತಿಗಾಗಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಾಕಿಯಿರುವ 48 ಕೊಳವೆಬಾವಿಗಳ ಬಿಲಲ್ಪಾವತಿಗೆ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ತುರ್ತು ಕುಡಿಯುವ ನೀರಿನ ಕಾಮಗಾರಿಗಳ ಸಂಬಂಧ ಪಾರದರ್ಶಕ ಕಾಯ್ದೆಯಡಿ ವಿನಾಯಿತಿ ಹೊಂದಿರುವ 5 ಲಕ್ಷ ಮಿತಿ ಒಳಗಿನ ಅನುಮೋದಿತ ಕಾಮಗಾರಿಗಳನ್ನು ಜಿಪಂ ಮಟ್ಟದಲ್ಲಿಯೇ ಅನುಮೋದನೆ ಪಡೆದು ಅನುಷ್ಠಾನಗೊಳಿಸಲು ಸೂಚಿಸಲಾಗಿದೆ. ಉಳಿದಂತೆ ಅಲ್ಪಾವಧಿ 15 ದಿನಗಳ ಟೆಂಡರ್ ಕರೆಯಲು ಜಿಲ್ಲಾ ಮಟ್ಟದಲ್ಲಿಯೇ ಸಿಇಒ ಅವರ ಅನುಮತಿ ಪಡೆದು ಕ್ರಮವಹಿಸಬಹುದಾಗಿದೆ ಎಂದು ಜನಪ್ರತಿನಿಧಿಗಳಿಗೆ ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಪಂಪ್ ಮೋಟರ್ ಬ್ಯಾಂಕ್ ವ್ಯವಸ್ಥೆ ಮಾಡಿಕೊಂಡು ಮುಂಜಾಗ್ರತೆಯಾಗಿ ಕನಿಷ್ಠ 20 ಮೋಟಾರ್ ಪಂಪುಗಳನ್ನು ಕಾರ್ಯಪಾಲಕ ಎಂಜಿನಿಯರ್ ಅವರ ಮಟ್ಟದಲ್ಲಿಯೇ ಇಟ್ಟುಕೊಳ್ಳಲು ನಿರ್ಧರಿಸಬಹುದು. ಇದಕ್ಕೆ ಬೇಕಾದ ಅನುದಾನವನ್ನು ಎನ್.ಆರ್.ಡಿ.ಡಬ್ಲ್ಯು.ಪಿ ಅಥವಾ ಜಿಲ್ಲಾಧಿಕಾರಿಗಳಲ್ಲಿ ಲಭ್ಯವಿರುವ ಹಣದಿಂದ ಭರಿಸಬಹುದು ಎಂದು ತಿಳಿಸಿದ್ದಾರೆ.
ಜಿಪಂನವರು ಜಿಲ್ಲಾಧಿಕಾರಿಗಳ ಸಮನ್ವಯದಲ್ಲಿ ಖಾಸಗಿ ಕೊಳವೆಬಾವಿಗಳ ಸೇವೆ ಪಡೆಯಬಹುದು. ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಅಗತ್ಯವಿರುವ ನೀರು ಪೂರೈಸಲು ಕೊಳವೆ ಬಾವಿಯನ್ನು ನೀಡಿದಲ್ಲಿ ನೀರಿನ ಲಭ್ಯತೆಗೆ ಪ್ರತಿ ಮಾಹೆ ಕನಿಷ್ಠ 5ರಿಂದ 10 ಸಾವಿರ ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.
ಬಾಕಿಯಿರುವ ಕೋಲಾರ ಜಿಲ್ಲೆಯ 298 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 105 ಕುಡಿಯುವ ನೀರಿನ ಯೋಜನೆಗಳಿಗೆ  ವಿದ್ಯುತ್ತೀಕರಣಗೊಳಿಸಲು ಕ್ರಮ ಜರುಗಿಸಲಾಗಿದೆ.ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಟಾಸ್ಕ್‌ಫೋರ್ಸ್ ಅಡಿ ಕೊರೆದಿರುವ  ಕೊಳವೆಬಾವಿಗಳ ಬಿಲ್ ಪಾವತಿಸುವ ಮುನ್ನಾ ಸ್ಥಳೀಯವಾಗಿ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಜಿಪಂ ಉಪ ಕಾರ್ಯದರ್ಶಿ, ಕಾರ್ಯನಿರ್ವಹಕಾಧಿಕಾರಿ, ಆಯಾ ಎಸ್ಕಾಂ ಎಂಜಿನಿಯರ್‌ರವರು ತನಿಖೆ ಮಾಡಿ ದೃಢೀಕರಿಸಬೇಕೆಂದು ಸೂಚಿಸಿದ್ದಾರೆ.
ಜಿಲ್ಲೆಯ ಅಗತ್ಯತೆ ಆಧರಿಸಿ ಭೂವಿಜ್ಞಾನಿ ಸಲಹೆ ಮೇರೆಗೆ ಕೊಳವೆಬಾವಿಗಳ ಪುನಃಶ್ಚೇತನ ಕಾಮಗಾರಿಗಳು ಕೈಗೊಳ್ಳಬೇಕು. ಜೊತೆಗೆ ಸ್ಥಳೀಯ ಅಗತ್ಯತೆ ಆಧರಿಸಿ ಈಗಾಗಲೇ ಜಿಲ್ಲಾ ಮಟ್ಟದ ಸಮಿತಿಯಲ್ಲಿ ನಿರ್ಧರಿಸಿರುವಂತೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸ್ಥಳೀಯವಾಗಿ ನಿರ್ಧಾರ ಕೈಗೊಳ್ಳಬಹುದು.
ಇದಲ್ಲದೆ ಎನ್‌ಆರ್‌ಡಿ ಡಬ್ಲ್ಯುಪಿ ಮಾರ್ಗಸೂಚಿಯ ವ್ಯಾಪ್ತಿಗೆ ಬರುವ ಬಾಕಿ ಕಾಮಗಾರಿಗಳನ್ನು 2014-15 ರ ಸಾಲಿನ ಕ್ರಿಯಾ ಯೋಜನೆಯಡಿ ಅಳವಡಿಸಿಕೊಳ್ಳುವ ನಿಬಂಧನೆಯೊಂದಿಗೆ ಸ್ಥಳೀಯ ಅಗತ್ಯತೆ ಆಧರಿಸಿ ಕ್ರಿಯಾ ಯೋಜನೆಗೆ ಜಿಪಂ ಹಂತದಲ್ಲಿ ಅನುಮೋದನೆ ಪಡೆದುಕೊಂಡು ಅನುಷ್ಠಾನ ಪ್ರಕ್ರಿಯೆ ಕೈಗೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement