ಜಾನುವಾರು ಸಂತೆ ಆರಂಭಿಸಲು ಒತ್ತಾಯ
ಬಂಗಾರಪೇಟೆ: ಕಾಲುಬಾಯಿ ಜ್ವರದ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿಂದ ಜಾನುವಾರುಗಳ ಸಂತೆಯನ್ನು ಜಿಲ್ಲಾಡಳಿತ ಸಂಪೂರ್ಣ ನಿಷೇಧಿಸಿದ್ದು ಈಗ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಬಂದಿರುವುದರಿಂದ ಮತ್ತೆ ಜಾನುವಾರುಗಳ ಸಂತೆಯನ್ನು ಪ್ರಾರಂಭಿಸಲು ಜಿಲ್ಲಾಡಳಿತ ಅನುಮತಿ ಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಜ್ವರ ವ್ಯಾಪಕವಾಗಿ ಹರಡಿ ನೂರಾರು ಜಾನುವಾರುಗಳು ಜತೆಗೆ ಕುರಿಗಳು ಮೃತಪಟ್ಟ ಹಿನ್ನಲೆಯಲ್ಲಿ ಜಿಲ್ಲಾಡಳಿತ ವಾರದ ಸಂತೆಗಳನ್ನು ನಿಯಂತ್ರಣಕ್ಕೆ ಬರುವವರೆಗೂ ನಿಷೇಧಿಸಲು ಎಲ್ಲಾ ತಾಲೂಕು ಆಡಳಿತಕ್ಕೆ ಆದೇಶ ನೀಡಿತ್ತು. ಅದರಂತೆ ಪಟ್ಟಣ ಮತ್ತು ಹೋಬಳಿ ಕೇಂದ್ರಗಳಲ್ಲಿ ವಾರದ ಸಂತೆಗಳನ್ನು ನಿಲ್ಲಿಸಲಾಗಿತ್ತು.
ಸರ್ಕಾರ ಬರಗಾಲದಲ್ಲಿ ಹಸುಗಳಿಗೆ ಮೇವು ಬ್ಯಾಂಕು ತೆರೆಯಲಿಲ್ಲ, ಹುಲ್ಲು ಸಿಗದೆ ದನಗಳನ್ನು ಪೋಸಿಸಲಾಗದೆ ತ್ರಿಶಂಕು ಸ್ಥಿತಿಯಲ್ಲಿರುವ ರೈತರು ಅವುಗಳನ್ನು ಮಾರಾಟಕ್ಕೆ ಮುಂದಾದರೂ ಸಂತೆಗಳು ನಿಷೇಧದಿಂದ ಹತಾಶರಾಗಿದ್ದರು. ಕಾಲುಬಾಯಿ ಜ್ವರ ಈಗ ಜಿಲ್ಲೆಯಲ್ಲಿ ಹತೋಟಿಗೆ ಬಂದಿರುವುದರಿಂದ ಮತ್ತೆ ವಾರದ ಸಂತೆಗಳನ್ನು ಆರಂಭಿಸಿದರೆ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂಬುದು ರೈತರ ವಾದವಾಗಿದೆ.