ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ
ಕೆಜಿಎಫ್: ನಗರದ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಶಾಸಕಿ ವೈ. ರಾಮಕ್ಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕೆಜಿಎಫ್ ಹೃದಯಭಾಗದ ಬಸ್ ನಿಲ್ದಾಣ ಕಾಮಗಾರಿಗೆ 2010ರಲ್ಲಿ 2.35 ಕೋಟಿ ಅನುದಾನ ಬಿಡುಗಡೆಯಾಗಿದ್ದು ನಂತರ ಕಾಮಗಾರಿ ಜಾರಿಯಾಗದೆ ಹಾಗೇ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಕಾಮಗಾರಿಗೆ ಪ್ರಕ್ರಿಯೆ ದೊರೆತಿದ್ದು ಕಾಮಗಾರಿ ಜಾರಿಯಿಂದ ಕ್ಷೇತ್ರದ ಜನರ ಬಹು ವರ್ಷಗಳ ಬೇಡಿಕೆ ಈಡೇರಿಸಿದಂತಾಗಿದೆ ಎಂದರು. ಕಾಮಗಾರಿಗೆ ಚಾಲನೆ ನೀಡುವ ಮುನ್ನ ನಗರಸಭೆ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಮಳಿಗೆ ಕಾಮಗಾರಿ ಚಾಲನೆಗೆ ಮಾಜಿ ಶಾಸಕ ವೈ. ಸಂಪಂಗಿ ಹಾಗೂ ಅವರ ಬೆಂಬಲಿಗರು ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಮಾಜಿ ಶಾಸಕ ಎಂ. ಭಕ್ತವತ್ಸಲಂ ವಿರೋಧ ವ್ಯಕ್ತಪಡಿಸಿದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಸ್ಥಳಕ್ಕಾಗಮಿಸಿ ಮಾಜಿ ಶಾಸಕ ವೈ. ಸಂಪಂಗಿ ಹಾಗೂ ಎಂ. ಭಕ್ತವತ್ಸಲಂ ಅವರನ್ನು ಕಾಮಗಾರಿ ಸ್ಥಳಕ್ಕೆ ಹೋಗದಂತೆ ಸೂಚಿಸಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ಈ ವೇಳೆ ನಗರಸಭಾ ಪೌರಾಯುಕ್ತ ವಿ. ಬಾಲಚಂದ್ರ, ಗುತ್ತಿಗೆದಾರ ಸುರೇಶ್ನಾರಾಯಣ, ಭಾಸ್ಕರ್ ಇದ್ದರು.