ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮರಳು ಮಾಫಿಯಾಕ್ಕೆ ಬರಿದಾಗುತ್ತಿರುವ ಚಿತ್ರೆ

Rashmi Kasaragodu
Updated On : 1 Mar 2014, 1:02 am

ಗುಡಿಬಂಡೆ: ಅಕ್ರಮ ಮರಳು ಸಾಗಣೆದಾರರ ಧನ ದಾಹಕ್ಕೆ ತಾಲೂಕಿನ ಅಮೂಲ್ಯ ಪ್ರಾಕೃತಿಕ ಸಂಪತ್ತಾದ ನದಿಪಾತ್ರಗಳು ಬಲಿಯಾಗುತ್ತಿವೆ ಎಂದು ಜನ ಕಳವಳ ವ್ಯಕ್ತ ಪಡಿಸಿದ್ದಾರೆ.
ಅಂತರ್ಜಲ ಮಟ್ಟ ಕಾಯ್ದುಕೊಂಡು ಜಲಸಂವೃದ್ಧಿಗೆ ಸಹಕಾರಿಯಾಗುವ ಮರಳಿನ ನಿಕ್ಷೇಪಗಳು ಈ ಪ್ರದೇಶದಲ್ಲಿ ಯಥೇಚ್ಚವಾಗಿರುವುದರಿಂದ ಸುಲಭವಾಗಿ ಹಣ ಮಾಡಲು ಯತ್ನಿಸಿರುವ ಕೆಲವರು ಅಕ್ರಮ ಮರಳು ಸಾಗಾಟದಲ್ಲಿ  ತೊಡಗಿದ್ದಾರೆ. ಇದರಿಂದಾಗಿ ನದಿ  ಪಾತ್ರದ ಅಂತರ್ಜಲ ಮಟ್ಟ ನಶಿಸಿ ಕೊಳವೆ ಬಾವಿಗಳು ಬತ್ತಿಹೋಗಿವೆವೆ. ಪ್ರಭಾವಿ ವ್ಯಕ್ತಿಗಳ ಕ್ರಪಾ ಕಟಾಕ್ಷದಿಂದ ಕಾನೂನನ್ನು ಲೆಕ್ಕಿಸದೆ ಈ ಕರಾಳ ದಂಧೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ. ತಾಲೂಕಿನ ತಿರುಮಣಿ ಗ್ರಾಪಂ ವ್ಯಾಪ್ತಿಯ ಚಿನ್ನಪ್ಪನ ಹಳ್ಳಿ, ಗೆಗ್ಗಿಲರಾಳ್ಳಹಳ್ಳಿ ಚಿಕ್ಕನೆಂಚರ್ಲು, ದೊಡ್ಡನೆಂಚರ್ಲು, ಕಾಟೇನಹಳ್ಳಿ, ಕದಿರಶೆಟ್ಟಹಳ್ಳಿ, ಕಾಲುವಗಡ್ಡಹಳ್ಳಿ, ದಿನ್ನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನಿರಂತರವಾಗಿ ಈ ಅಕ್ರಮ ದಂಧೆ ನಡೆಯುತ್ತಿದೆ.
ಈ ಬಗ್ಗೆ ಹಲವಾರು ಬಾರಿ ದೂರು ನೀಡಿದ್ದರೂ ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಗಲು ರಾತ್ರಿಯೆನ್ನದೆ ಮರಳು ಸಾಗಣೆ ವಾಹನಗಳ ಓಡಾಟದಿಂದಾಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಹಾಳಾಗಿ ಸಾಮಾನ್ಯ ಜನಜೀವನಕ್ಕೆ ಭಂಗವುಂಟಾಗಿದೆ. ಅಕ್ರಮ ತಡೆಯಲು ಮುಂದಾದ ಹಲವರ ಮೇಲೆ ಹಲ್ಲೆ ನಡೆಸಿದ ಘಟನೆಗಳು ಸಂಭವಿಸಿವೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಅಕ್ರಮಕ್ಕೆ ಕಡಿವಾಣ ಹಾಕದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ತಹಸೀಲ್ದಾರ್ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಶೈಲಜಾ, ತಾಲೂಕಿನ ಹಲವೆಡೆ ಕೆರೆ ಕುಂಟೆಗಳಲ್ಲಿ ಮಣ್ಣು ಸಾಗಿಸುವ ನೆಪದಲ್ಲಿ  ಅಕ್ರಮವಾಗಿ ಮರಳನ್ನು ಕೊಂಡೊಯ್ಯುತ್ತಿದ್ದ ಪ್ರಕರಣಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ಹೆಚ್ಚಿನ ನಿಗಾ ವಹಿಸಿ ಅಕ್ರಮ ಮರಳು ಸಾಗಾಟ ಹಾಗೂ ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸಲಾಗುವುದು. ಸರ್ಕಾರಕ್ಕೆ ಸಂಬಂಧ ಪಟ್ಟ ಯಾವುದೇ ಭೂಮಿಯಲ್ಲಿ ಮಣ್ಣು, ಕಲ್ಲು, ಮುಂತಾದುವನ್ನು ತೆಗೆಯಲು ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯವೆಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement