ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರು. 2,650 ಕೋಟಿ ಬಂಡವಾಳ ಹೂಡಿಕೆಗೆ ನೋಂದಣಿ

Rashmi Kasaragodu
Updated On : 1 Mar 2014, 12:58 pm

ಗೌರಿಬಿದನೂರು: ತಾಲೂಕಿನ ಕುಟುಮಲಕುಂಟೆ ಕೈಗಾರಿಕೆ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿವಿಧ ರಾಜ್ಯಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯಮಿಗಳು ಬರುತ್ತಿದ್ದು, ಸುಮಾರು 2,650 ಕೋಟಿ ರು.ಗಳ ಸುಮಾರು 136 ಕಂಪನಿಗಳು ನೋಂದಣಿ ಮಾಡಿಸಿವೆ ಎಂದು ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಪಟ್ಟಣದ ಎಚ್.ಎನ್. ಕಲಾಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾಮಂಡಲ ಹಮ್ಮಿಕೂಂಡಿದ್ದ ಜಿಲ್ಲಾ ಮಟ್ಟದ ಹೂಡಿಕೆದಾರರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಮಾರು 266 ಎಕರೆಯಲ್ಲಿ ಬಂಡವಾಳ ಹೂಡುವ ಉದ್ದಿಮೆದಾರರಿಗೆ ಮೂಲ ಸೌಕರ್ಯಗಳಾದ ನೀರು ವಿದ್ಯುತ್ ಹಾಗೂ ಸ್ಥಳವನ್ನು ನೀಡಬೇಕಾಗಿದೆ, ಕೈಗಾರಿಕೆಗಳು ಬರುವುದರಿಂದ ಅದರಲ್ಲಿಯೂ ಮುಖ್ಯವಾಗಿ ಗಾರ್ಮೆಂಟ್ಸ್ ಉದ್ದಿಮೆಗಳು ಹೆಚ್ಚು ಬಂದರೆ ಕಡಿಮೆ ಶಿಕ್ಷಣ ಪಡೆದ ಬಡ ಮಹಿಳೆಯರಿಗೆ ಉದ್ಯೋಗ ಸಿಗಲಿದೆ ಎಂದರು.
ಮಧುಗಿರಿ ಚಿಕ್ಕಬಳ್ಳಾಪುರ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ರಸ್ತೆಗಳು ಅಭಿವೃದ್ಧಿಯಾಗುತ್ತವೆ. ಆದರೆ ಯಲಹಂಕ ಕುಡುಮಲಕುಂಟೆ ರಾಜ್ಯ ಹೆದ್ದಾರಿ 9 ರಸ್ತೆ ಅಭಿವೃದ್ಧಿಗಾಗಿ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಸಾಕಷ್ಟು ಪ್ರಯತ್ನಿಸಲಾಗಿದೆ. ಆದರೆ ಈ ರಸ್ತೆ ಈಗಿರುವ ರಾಷ್ಟ್ರೀಯ ಹೆದ್ದಾರಿಗೆ 100 ಕಿ.ಮೀ.ಒಳಗಿರುವುದರಿಂದ ಸಾಧ್ಯವಾಗಿಲ್ಲ ಆದರೆ ಮುಂಬರುವ ದಿನಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಇಲಾಖೆ ಸಚಿವ ರೋಷನ್ ಬೇಗ್ ಅವರ ಹಾಗೂ ರೈಲ್ವೆ ಇಲಾಖೆ ಸಹಯೋಗದಿಂದ ಯಲಹಂಕದಿಂದ ಗೌರಿಬಿದನೂರು ಮಧ್ಯೆ ಹಾದುಹೋಗುವ ರೈಲ್ವೆ ಕ್ರಾಸಿಂಗ್ ಬ್ರಿಡ್ಜ್‌ಗಳನ್ನು ನಿರ್ಮಿಸಲು ಕ್ರಮ ಕೈಗೊಂಡು ಟೋಲ್ ವಸೂಲಿ ಮಾಡುವಂತಹ ನಾಲ್ಕು ಪಥಗಳ ರಸ್ತೆ ನಿರ್ಮಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವ ಮೂಲಕ ಉದ್ದಿಮೆದಾರರಿಗೆ ಉತೇಜನ ನೀಡಲಾಗುವುದು ಎಂದರು.
ಬರಗಾಲದಿಂದ ತತ್ತರಿಸಿರುವ ತಾಲೂಕಿನ ಜನತೆ ಒಂದೆಡೆ ನೀರಿಲ್ಲದೆ ವ್ಯವಸಾಯ ನಷ್ಟದಲ್ಲಿದೆ, ಅಂತರ್ಜಲ ಕುಸಿದಿರುವುದರಿಂದ ನೀರಿನ ಸಮಸ್ಯೆಯಾಗಿದೆ, ಇದಕ್ಕಾಗಿ ರಾಜ್ಯ ಸರ್ಕಾರ ಸಕಲೇಶಪುರದ ಬಳಿಯ ಎತ್ತಿನಹೊಳೆಯಿಂದ 12,600 ಕೋಟಿ ರು.ಗಳ ಯೋಜನೆಗೆ ಅನುಮೋದನೆ ನೀಡಿದ್ದು ಮಾ.3ರಂದು ಚಿಕ್ಕಬಳ್ಳಾಪುರದಲ್ಲಿ ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಆರ್.ಶಿವಕುಮಾರ್ ಮಾತನಾಡಿ, ಸುಮಾರು 136 ಕಂಪನಿಗಳು ಬಂಡವಾಳ ಹೂಡಿಕೆಗೆ ನೋಂದಣಿ ಮಾಡಿಸಿದ್ದು ಸುಮಾರು 2,650 ಕೋಟಿ ರು.ಗಳು ಹೂಡಿಕೆಯಾಗಲಿದೆ.
ಜಮೀನಿನ ಬೆಲೆ 71 ಲಕ್ಷಗಳಷ್ಟಿದ್ದು  ಇದನ್ನು ಕೊಳ್ಳಲು ಸರ್ಕಾರ ಮಧ್ಯಪ್ರವೇಶಿಸಿ 4ರಿಂದ 5 ಕಂತುಗಳನ್ನು ಕೊಡಿಸಬೇಕು ಎಂದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತ  ಮಹೇಶ್ವರರಾವ್, ಎಫ್‌ಕೆಸಿಸಿಐ ಉಪಾಧ್ಯಕ್ಷ ಸಂಪತ್ ರಾಮನ್, ಕೈಗಾರಿಕೆ ಮತ್ತು ವಾಣಿಜ್ಯ ಮಹಾಸಂಸ್ಥೆಯ ಪ್ರಧಾನಕಾರ್ಯದರ್ಶಿ ಸುದರ್ಶನ್, ಪೆರಿಕಲ್ ಎಂ. ಸುಂದರ್, ಎಂ.ಸಿ. ದಿನೇಶ್, ಜಿಪಂ ಉಪಾಧ್ಯಕ್ಷ ರಾಘವೇಂದ್ರಹನುಮಾನ್, ಜಿಲ್ಲಾಧಿಕಾರಿ ಡಾ. ವಿಶಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement