ರೇಲ್ವೆ ಕೋಚ್ ನಿರ್ಮಾಣಕ್ಕೆ ಕೇಂದ್ರ ಅಸ್ತು: ಶಾಸಕ ರಮೇಶ್ ಕುಮಾರ್ ಹರ್ಷ
ಕೋಲಾರ: ಶ್ರೀನಿವಾಸಪುರ ತಾಲೂಕಿನಲ್ಲಿ ರೇಲ್ವೆ ಕೋಚ್ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದು ಬರಪೀಡಿತ ಕೋಲಾರ ಜಿಲ್ಲೆಯ ಜನತೆಯ ಸೌಭಾಗ್ಯ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಬಣ್ಣಿಸಿದ್ದಾರೆ.
ಶುಕ್ರವಾರ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಜನತೆಯ ಬಹು ನಿರೀಕ್ಷಿತ ರೇಲ್ವೆ ಕೋಚ್ ಕಾರ್ಖಾನೆಯ ಸ್ಥಾಪನೆಗೆ ಒಪ್ಪಿಗೆ ನೀಡಿರುವ ವಿಷಯದಿಂದ ಸಂತಸ ಉಂಟಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ರೇಲ್ವೆ ಕೋಚ್ ಕಾರ್ಖಾನೆಗೆ 1,450 ಕೋಟಿ ರು.ಬೇಕಾಗಿದ್ದು ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶೇಷ ಕಾಳಜಿ ವಹಿಸಿ ಯೋಜನಾ ವೆಚ್ಚದಲ್ಲಿ ಅರ್ಧದಷ್ಟು ಹಣವನ್ನು ನೀಡಲು ಸಮ್ಮತಿಸಿರುವ ಹಿನ್ನಲೆಯಲ್ಲಿ ಕೇಂದ್ರಸರ್ಕಾರ ಯೋಜನೆ ಅನುಷ್ಠಾನಕ್ಕೆ ಸಮ್ಮತಿಸಲು ಕಾರಣವಾಗಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.
ರೇಲ್ವೆ ಕೋರ್ಚ್ ಕಾರ್ಖಾನೆ ನಿರ್ಮಾಣಕ್ಕೆ ಸುಮಾರು 1,100 ಎಕರೆ ಭೂಮಿಯ ಅವಶ್ಯಕತೆಯಿದೆ, ರಾಜ್ಯ ಸರ್ಕಾರ ವ್ಯಾಪ್ತಿಗೆ ಸೇರಿದ ಭೂಮಿಯನ್ನು ಉಚಿತವಾಗಿ ಯೋಜನೆಗಾಗಿ ನೀಡಲು ಈಗಾಗಲೇ ರಾಜ್ಯ ಸರ್ಕಾರ ರೇಲ್ವೆ ಮಂಡಳಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಖಾಸಗಿ ಭೂಮಿಯ ಸ್ವಾಧೀನಕ್ಕೂ ಪ್ರಕ್ರಿಯೆ ನಡೆದಿದೆ ಎಂದ ರಮೇಶ್ ಕುಮಾರ್, ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡಿರುವುದರಿಂದ ಜನತೆಯಲ್ಲಿ ಇದ್ದ ಆತಂಕ ನಿವಾರಣೆ ಮಾಡಿದಂತಾಗಿದೆ ಎಂದರು.
ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟಣೆಗೆ ಮುಂಚೆಯೇ ಕೇಂದ್ರ ಸರ್ಕಾರ ರೇಲ್ವೆ ಕೋರ್ಚ್ ನಿರ್ಮಾಣಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿರುವುದರಿಂದ ಅದಷ್ಟು ಬೇಗನೆ ಯೋಜನೆಗೆ ಚಾಲನೆ ನೀಡಲಾಗುತ್ತದೆ, ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನಖರ್ಗೆ ಹಾಗೂ ನಮ್ಮವರೇ ಆದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರ ಬಳಿ ಚರ್ಚಿಸಿ ದಿನಾಂಕ ನಿಗದಿ ಮಾಡುವುದಾಗಿ ಹೇಳಿದರು.
ರೇಲ್ವೆ ಕೋಚ್ ತನ್ನ ಕ್ಷೇತ್ರದಲ್ಲಿ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಕೈಗೊಂಡ ತೀರ್ಮಾನದಿಂದ ತೃಪ್ತಿಯಾಗಿದೆ, ಇದರಿಂದ ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವುದಕ್ಕೆ ಸಹಾಯವಾಗಲಿದೆ, ಕನಿಷ್ಠ 1,500 ರಿಂದ 2,000 ಯುವಕರಿಗೆ ಉದ್ಯೋಗ ಸಿಗುವುದರಿಂದ ಅದಷ್ಟು ಬೇಗನೆ ಯೋಜನೆ ಪ್ರಾರಂಭವಾಗಬೇಕೆಂಬುದು ತಮ್ಮ ಆಸೆಯಾಗಿದ್ದು, ಇದಕ್ಕಾಗಿ ನಿರಂತರ ಪ್ರಯತ್ನ ಮಾಡುವುದಾಗಿ ನುಡಿದರು.
ರೇಲ್ವೆ ಕೋಚ್‌ಗೆ ರಾಜ್ಯ ಸರ್ಕಾರ ಭೂಮಿ, ನೀರು ಮತ್ತು ವಿದ್ಯುತ್ ಒದಗಿಸಲು ಒಪ್ಪಿರುವುದು, ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡಿರುವುದು ಹಾಗೂ ಇದಕ್ಕಾಗಿ ಶ್ರಮಿಸಿದ ಕೇಂದ್ರ ಸಚಿವ ಮಲ್ಲಿಕಾರ್ಜುನಖರ್ಗೆ ಹಾಗೂ ಕೆ.ಎಚ್. ಮುನಿಯಪ್ಪನವರನ್ನು ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.