ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ, ಖಂಡಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದಿರುವುದಲ್ಲದೇ ಸವರ್ಣೀಯರು ದಲಿತರಿಗೆ ಸಾಮೂಹಿಕವಾಗಿ ಬಹಿಷ್ಕಾರ ಹಾಕಿರುವುದನ್ನು ಖಂಡಿಸಿ ಸಿಪಿಎಂನ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಶಿಡ್ಲಘಟ್ಟದ ವಣತ್ತದ ಬಳಿ ರಸ್ತೆ ತಡೆ ನಡೆಸಿದ ನಂತರ ಉಪ ವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಕುಳಿತರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ಗದ್ಯಾಳ ಗ್ರಾಮದಲ್ಲಿ ಡಾ. ಅಂಬೇಡ್ಕರೆ ಫೋಟೋಗೆ ಸಗಣಿ ಬಳಿಯಲಾಗಿದೆ. ಇದನ್ನು ಖಂಡಿಸಿ ದಲಿತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸವರ್ಣೀಯರು ದ್ವೇಷದಿಂದ ದಲಿತರಿಗೆ ಸಾಮೂಹಿಕ ಬಹಿಷ್ಕಾರ ಹಾಕಿದ್ದಾರೆ. ಅಲ್ಲದೇ ದಲಿತರ ಪರವಾಗಿದ್ದ ಇಬ್ಬರ ಮೇಲೆ ತಲಾ 5 ಸಾವಿರ ರು. ದಂಡ ಹಾಕಿದ್ದು ಕಳೆದ ನಾಲ್ಕು ತಿಂಗಳಿಂದ ದಲಿತರಿಗೆ ಕೂಲಿ ಕೆಲಸ ನೀಡುತ್ತಿಲ್ಲ. ಇದರಿಂದ ದಲಿತರು ದಿನಸಿಗಾಗಿ, ಹಿಟ್ಟಿನ ಗಿರಣಿಗಾಗಿ,ಕೆಲಸ ಕಾರ್ಯಗಳಿಗಾಗಿ ಸುಮಾರು 12 ಕಿ.ಮೀ.ದೂರ ಹೋಗಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಲಿತರ ಬಹಿಷ್ಕಾರದಂತಹ ಘಟನೆಗಳು ನಡೆಯುತ್ತಿರುವುದು ದುರದುರದೃಷ್ಟಕರ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ದುಷ್ಕೃತ್ಯಗಳಿಗೆ ಕಾರಣಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ದಲಿತರಿಗೆ ರಕ್ಷಣೆ ನೀಡಲು ಮುಂದಾಗಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರು ತಹಸೀಲ್ದಾರ್ ನಟೇಶ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಬಿ.ಎನ್.ಮುನಿಕೃಷ್ಣಪ್ಪ, ಕೆ. ನಾಗರಾಜ್, ಚೆನ್ನರಾಯಪ್ಪ ಮುಂತಾದವರು ಭಾಗವಹಿಸಿದ್ದರು.