ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುವೆಂಪು ಆದರ್ಶ ಪಾಲನೆಯಾಗಲಿ

Mainashree
Updated On : 1 Jan 2014, 11:46 am

ಕೋಲಾರ: ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್‌ಕುಮಾರ್ ರಾಜು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಆದರ್ಶ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಹಮ್ಮಿಕೊಂಡಿದ್ದ ಕುವೆಂಪು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಅವರು ರಚಿಸಿರುವ ಕೃತಿಗಳು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಮೀಸಲಾಗದೆ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ ಹಾಗಾಗಿ ಮಾನವ ಸಮಾಜ ಇರುವಷ್ಟು ಕಾಲ ಕುವೆಂಪುರವರ ವಿಚಾರಧಾರೆಗಳು ಪ್ರಸ್ತುತವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.
ಕುವೆಂಪು ಅವರು ಹುಟ್ಟಿ ಬೆಳೆದ ಮನೆಯನ್ನು ಇಂದಿಗೂ ಸಹ ಪಳೆಯುಳಿಕೆಯಾಗಿ ಉಳಿಸಿಕೊಂಡು ಬರಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅಂತಹ ಚಿಕ್ಕ ಮನೆಯಲ್ಲಿ ಹುಟ್ಟಿ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಕನ್ನಡ ನಾಡಿಗೆ ಮಾತ್ರವಲ್ಲದೆ ವಿಶ್ವಕ್ಕೆ ಉತ್ತಮ ಕೊಡುಗೆ ನೀಡಿರುವ ಇವರ ಆದರ್ಶಗಳನ್ನು ಹಾಗೂ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ. ನಟರಾಜ್ ಮಾತನಾಡಿ, ಕುವೆಂಪು ಅವರ ಸಾಹಿತ್ಯದ ದೃಷ್ಟಿಕೋನ ಮಾನವೀಯತೆ ಮತ್ತು ವೈಚಾರಿಕತೆ ಎಂಬ ಎರಡು ನೆಲೆಗಟ್ಟಿನ ಮೇಲೆ ನಿಂತಿದೆ, ಇವರ ಸಂದೇಶಗಳನ್ನು ಪಾಲಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕಾಗಿದೆ ಎಂದರು.
ಕುವೆಂಪು ಅವರನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸದೆ ಇವರ ಸಾಹಿತ್ಯ ಮತ್ತು ವಿಚಾರಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಂತಾಗಬೇಕು, ಅವರು ರಚಿಸರುವ ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ಭಾಷಾಂತರಿಸುವ ಮೂಲಕ ಜಗದ ಕವಿಗೆ ಹೆಚ್ಚಿನ ಗೌರವ ಸಲ್ಲುವಂತೆ ಮಾಡಬೇಕೆಂದರು.
ಕುವೆಂಪು ಅವರು ವೈಚಾರಿಕತೆಯನ್ನು ಪ್ರತಿಪಾದಿಸಿದರೂ ಯಾವುದೇ ಧರ್ಮ ಮತ್ತು ದೇವರನ್ನು ವಿರೋಧಿಸುತ್ತಿರಲಿಲ್ಲ, ದೇವರು ಮತ್ತು ಧರ್ಮದ ಹೆಸರಿನಲ್ಲಿ ಮೂಢ ನಂಬಿಕೆಗಳನ್ನು ಬಿತ್ತುವುದಕ್ಕೆ ಒಪ್ಪುತ್ತಿರಲಿಲ್ಲ. ಆದರೆ, ಕೆಲವರು ಪ್ರಗತಿಪರರ ಹೆಸರಿನಲ್ಲಿ ಕುವೆಂಪು ಬಗ್ಗೆ ತಪ್ಪು ಅಭಿಪ್ರಾಯ ಮೂಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆಂದು ವಿಷಾದಿಸಿದರು.
ಕುವೆಂಪು ಅವರು ಸ್ವಾಮಿ ವಿವೇಕಾನಂದರ ರೀತಿಯಲ್ಲಿ ವೈಚಾರಿಕತೆಯ ಪ್ರತಿಪಾದರಾಗಿದ್ದರು, ಯಾವುದೇ ವಿಷಯವಾದರೂ ಪ್ರಶ್ನೆ ಮಾಡಿ ನಂತರ ಒಪ್ಪುತ್ತಿದ್ದರು. ಅದೇ ರೀತಿ ಇಂದಿನ ವಿದ್ಯಾರ್ಥಿಗಳೂ ಯಾವುದನ್ನು ಪ್ರಶ್ನೆಮಾಡದೆ ಒಪ್ಪಿಕೊಳ್ಳಬೇಡಿ ವೈಚಾರಿಕತೆ ಮೂಲಕ ಪರಿಶುದ್ಧತೆ, ಪ್ರಜ್ಞಾವಂತಿಕೆ ಹಾಗೂ ಪಕ್ವತೆಯನ್ನು ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ. ನಾಗರಾಜ್ ಮಾತನಾಡಿ ಕುವೆಂಪು ಅವರ ವೈಚಾರಿಕತೆ ಹಾಗೂ ಸಾಹಿತ್ಯವನ್ನು ಕುರಿತು ಅವರಿಗೆ ಯುಗದ ಕವಿ ಜಗದ ಕವಿ ಎಂಬುದಾಗಿ ಕರೆದವರು ಬೇಂದ್ರೆಯವರು ಎಂದು ತಿಳಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎ. ಅಶ್ವಥ ರೆಡ್ಡಿ ಮಾತನಾಡಿ ಕುವೆಂಪು ಹೇಳಿದಂತೆ ಮನುಷ್ಯ ಹುಟ್ಟುತ್ತಲೇ ವಿಶ್ವಮಾನವನಾಗಿ ಹುಟ್ಟುತ್ತಾನೆ. ಆದರೆ ಕಾಲಾನಂತರ ದೇಶ, ಭಾಷೆ, ಜಾತಿ, ಧರ್ಮ ಹಾಗೂ ಜನಾಂಗಗಳೆಂದು ಭೇದ ಭಾವವನ್ನು ಮೂಡಿಸುವ ಮೂಲಕ ಅಲ್ಪ ಮಾನವನನ್ನಾಗಿ ಮಾಡುತ್ತಿದ್ದೇವೆ ಎಂದರು.
ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಡಾ.ಕೆ.ಎಂ.ಜೆ. ಮೋನಿ, ಕಾಲೇಜಿನ ಪ್ರಾಂಶುಪಾಲ ಎಸ್.ಕೆ. ಕಲಾಂ, ಕಾರ್ಯದರ್ಶಿ ಮಂಜುಳಾ ಶ್ರೀರಾಮ್ ಇದ್ದರು. ಉಪನ್ಯಾಸಕರಾದ ರವೀಂದ್ರ ಸಿಂಗ ಪ್ರಾಸ್ತಾವಿಕವಾಗಿ ಮಾತನಾಡಿ, ಸಿ. ಮುನಿಶಾಮಿ ನಿರೂಪಿಸಿ, ಎ.ಬಿ.ರಶ್ಮಿ ಸ್ವಾಗತಿಸಿ, ವಿದ್ಯಾರ್ಥಿ ಡಿ.ವಿ. ಸುನಿಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement