ಕುವೆಂಪು ವಿಶ್ವ ಮಾನವ ಸಂದೇಶ ಸಾರಿದ ದಾರ್ಶನಿಕ'
ಚಿಕ್ಕಬಳ್ಳಾಪುರ: ನಾನು ಎಲ್ಲ ಮತದವನು ಎಂಬ ನಿಲವು ಹೊಂದಿದ್ದ ಕುವೆಂಪು ಅವರು, ಜಾತಿ-ಮತ ಪಂಥಗಳನ್ನು ನಿರಾಕರಿಸಿ ವಿಶ್ವ ಮಾನವ ಸಂದೇಶವನ್ನು ಜನರಿಗೆ ಕೊಟ್ಟವರು ಎಂದು ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಕೆ.ಎನ್.ಕವನ ಅಭಿಪ್ರಾಯಪಟ್ಟರು.
ಕನ್ನಡ ಸಂಸ್ಕೃತಿ ಇಲಾಖೆ, 7 ಸ್ಟಾರ್ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ,
ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
'ಮಾನವ ಕುಲಂ ತಾನೊಂದೇ ವಲಂ' ಎಂಬ ಪಂಪನ ಮಾತನ್ನು ಸ್ವೀಕರಿಸಿದ ಕುವೆಂಪು ಅನಿಕೇತನ ಪ್ರಜ್ಞೆಯ ಮೂಲಕ ಮನುಷ್ಯರನ್ನು ವಿಶ್ವಮಾನವರನ್ನಾಗಿ ಮಾಡಲು ಹೊರಟರು. ಇನ್ನೂ ಸ್ವಾತಂತ್ರ್ಯ ಹೋರಾಟಗಾರರಾದ ಟಿಪ್ಪುಸುಲ್ತಾನ್ ದೇವನಹಳ್ಳಿಯಲ್ಲಿ ಹುಟ್ಟಿ ತಮ್ಮ ಸಂಸ್ಥಾನದಲ್ಲಿ ಎಲ್ಲಾ ಜಾತಿ ಮತದವರಿಗೂ ಪ್ರಾಶಸ್ತ್ಯ ಕೊಟ್ಟರು. ಇವರ ವಿಶ್ವ ಮಾನವ ಸಂದೇಶ ಎಲ್ಲರಿಗೂ ದಾರಿದೀಪವಾಗಬೇಕೆಂದರು. ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರಿಗೆ ಕನ್ನಡದ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಕುಪ್ಪಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ರಾಷ್ಟ್ರಕವಿ ಎನಿಸಿಕೊಂಡು ವಿಶ್ವ ಮಟ್ಟಕ್ಕೆ ಏರಿದ ಪುಟ್ಟಪ್ಪ ಕವಿ ಇವರು.
7 ಸ್ಟಾರ್ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಎಂ.ಡಿ.ಸುಭಾನ್ ಪ್ರಿಯ ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಸಾಹಿತ್ಯದಲ್ಲಿ ಸೌಹಾರ್ದತೆ ತತ್ವ ಎಂಬ ವಿಷಯವಾಗಿ ಪ್ರಾಂಶುಪಾಲ ಡಿ.ಎಂ. ಶ್ರೀನಿವಾಸಲು ಉಪನ್ಯಾಸ ನೀಡಿದರು.
ಚಿಂತಾಮಣಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಗತಿ ವಿ. ವೆಂಕಟರತ್ನಂ ಮುಂತಾದವರು ಉಪಸ್ಥಿತರಿದ್ದರು.