ನಿವೃತ್ತ ಅಧಿಕಾರಿ ರಾಮಮೂರ್ತಿಗೆ ಬೀಳ್ಕೊಡುಗೆ
ಮುಳಬಾಗಲು: ಮಂಗಳವಾರ ನಿವೃತ್ತರಾದ ತಹಸೀಲ್ದಾರ್ ಡಿ.ವಿ.ರಾಮಮೂರ್ತಿ ಅವರನ್ನು ಮಂಗಳವಾರ ಸಂಜೆ ಮಿನಿ ವಿಧಾನಸೌಧದಲ್ಲಿ ಬಿಳ್ಕೋಡುಗೆ ನೀಡಲಾಯಿತು. ಸರ್ಕಾರಿ ಕೆಲಸ ದೇವರ ಕೆಲಸ ಇದ್ದಂತೆ, ಸೇವೆಯಲ್ಲಿದ್ದಷ್ಟು ಕಾಲ ಆತ್ಮಸಾಕ್ಷಿಯಾಗೆ ಅನುಗುಣವಾಗಿ ಜನಪರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು, ಈ ಬಗ್ಗೆ ತಮಗೆ ತಮ್ಮ ಸೇವಾವಧಿ ತೃಪ್ತಿ ತಂದಿದೆ ಎಂದು ನಿವೃತ್ತ ತಹಸೀಲ್ದಾರ್ ಡಿ.ವಿ.ರಾಮಮೂರ್ತಿ ನುಡಿದರು.
ಇದೇ ವೇಳೆ ಉಪ ತಹಸೀಲ್ದಾರ್ ಅಗಿ ಪದೋನ್ನತಿ ಪಡೆದ ಬೈರಕೂರು ರೆಡ್ಡಗುಪ್ತ, ಬಿ.ಆರ್. ಮುನಿವೆಂಕಟಪ್ಪ, ಜಯರಾಮ್ ಅವರನ್ನು ಸನ್ಮಾನಿಸಲಾಯಿತು.
ಪಶುಪಾಲನ ಇಲಾಖೆಯ ನಿರ್ದೇಶಕ ಡಾ.ರಮಾನಂದ್ ಮಾತನಾಡಿ, ತಹಸೀಲ್ದಾರ್ ರಾಮಮೂರ್ತಿ ದಕ್ಷ ಆಡಳಿತಗಾರರಾಗಿದ್ದು ಸಜ್ಜನಿಕೆಗೆ ಹೆಸರಾಗಿದ್ದರು. ಮಾತ್ರವಲ್ಲ, ತಾಲೂಕಿನಲ್ಲಿ ಅಕ್ರಮ ಮರಳು ತಡೆಗೆ ಕಠಿಣ ಕ್ರಮ ಕೈಗೊಂಡಿದ್ದರು. ಯಾವುದೇ ಒತ್ತಡಕ್ಕೆ ಮಣೆಯದೆ ಕರ್ತವ್ಯ ನಿರ್ವಹಿಸಿದ್ದರು ಎಂದರು. ಉಪ ತಹಸೀಲ್ದಾರ್ ಕೊಂಡಪ್ಪ, ವೆಂಕಟೇಶ್, ಅರವಿಂದ್ ಮಂಜುನಾಥ್, ಸುರೇಶ್, ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.