ಬಂಗಾರಪೇಟೆ: ಅವರೆ ಸೊಗಡಿನ ಸೊಲ್ಲೇ ಇಲ್ಲ!
ಬಂಗಾರಪೇಟೆ: ಸತತವಾಗಿ ಬರ ತಾಂಡವಾಡುತ್ತಿರುವ ಕ್ಷೇತ್ರದಲ್ಲಿ ಈ ಬಾರಿ ಅವರೆಕಾಯಿಗೂ ಬರ ಆವರಿಸಿ ಅವರೆ ಪ್ರಿಯರನ್ನು ನಿರಾಶೆಗೊಳಿಸಿದೆ. ಡಿಸೆಂಬರ್ ತಿಂಗಳ ಆರಂಭದಿಂದ ಚುಮ ಚುಮ ಚಳಿ ಆರಂಭವಾಗಿ ಅವರೆ ಕಾಯಿ ಕಾಲ ಆರಂಭವಾಯಿತು ಎಂಬುದು ಅರ್ಥ. ಆದರೆ ಈ ಬಾರಿ ಜನವರಿ ಆರಂಭವಾಗಿದ್ದರೂ ಮಾರುಕಟ್ಟೆಯಲ್ಲಿ ಅವರೆ ಕಾಯಿ ಸೊಗಡು ಸೊಲ್ಲು ಇಲ್ಲದಂತಾಗಿದೆ.
ಈ ವೇಳೆಗಾಗಲೇ ಅವರೆ ಕಾಯಿ ಮಾರುಕಟ್ಟೆಯಲ್ಲಿ ಪ್ರವೇಶಿಸಿ ಗ್ರಾಹಕರನ್ನು ಆಕರ್ಷಿಸಬೇಕಿತ್ತು. ಆದರೆ ಅಂತಹ ಸೂಚನೆ ಕಂಡು ಬಂದಿಲ್ಲ. ಅಲ್ಪ-ಸ್ವಲ್ಪ ಅವರೆಕಾಯಿ ಮಾತ್ರ ಮಾರುಕಟ್ಟೆಗೆ ಬಂದಿದೆಯಾದರೂ ಸೊಗಡಿಲ್ಲದೆ ಇರುವುದರಿಂದ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಇದಕ್ಕೆ ಕಾರಣ ಮಳೆಯರಾಯನ ಮುನಿಸಿಂದ ಸಕಾಲಕ್ಕೆ ಮಳೆ ಬಾರದೆ ರೈತರು ಅವರೆಕಾಯಿ ಹಾಕದೆ ಇರುವುದರಿಂದ ಅವರೆ ಬೆಳೆಯಿಲ್ಲದೆ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಪ್ರದೇಶದಲ್ಲಿ ಮುಳಬಾಗಿಲು ತಾಲೂಕಿನಲ್ಲಿ ಅವರೆಕಾಯಿಯನ್ನು ಬೆಳೆಯುತ್ತಾರೆ. ಆದರೆ, ಮಳೆಯ ಕೊರೆಯಿಂದ ಈ ಬಾರಿ ಕುಂಠಿತಗೊಂಡಿದೆ. ಇದರಿಂದ ಪಕ್ಕದ ಆಂಧ್ರದ ಚಿತ್ತೂರು ಜಿಲ್ಲೆಯಿಂದ ಅವರೆಕಾಯಿ ಪಟ್ಟಣ ಪ್ರವೇಶ ಮಾಡಿ ಸೆಳೆಯುತ್ತಿದೆ.ಸೊಗಡು ಇಲ್ಲದಿರುವುದರಿಂದ ಬೆಲೆಯಲ್ಲಿ ಈಗ ಕೆಜಿಗೆ 25ರಿಂದ 30ಕ್ಕೆ ಇದೆ. ಆದರೂ ಗ್ರಾಹಕರು ಅವರೆಕಾಯಿ ಕೊಳ್ಳಲು ಹಿಂದೆ ಸರಿಯುವಂತಾಗಿದೆ.
ಅವರೆಕಾಯಿ ಕಾಲ ಬಂದರೆ ರೈತರು ಜೇಬು ತುಂಬ ಹಣ ನೋಡುತ್ತಿದ್ದರೂ ಕಳೆದ ಎರಡು ವರ್ಷಗಳಿಂದ ರೈತರ ಕೈ ಸುಡುತ್ತಿದೆ. ಗ್ರಾಹಕರು ವಿಧಿಯಿಲ್ಲದೆ ಸೊಗಡು ರಹಿತ ಅವರೆಕಾಯಿಯನ್ನು ಕೊಳ್ಳುವಂತಾಗಿದೆ. ಬರದಿಂದ ರೋಸಿ ಹೋಗಿರುವ ರೈತರಿಗೆ ಇತ್ತೀಚಿಗೆ ಕಾಡಾನೆಗಳು ಬಂದು ರೈತರ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡಿರುವುದು ಮತ್ತಷ್ಟು ಕುಗ್ಗುವಂತೆ ಮಾಡಿದೆ.