ಭೂ ಕಬಳಿಕೆ ಯತ್ನ: ಒಕ್ಕಲಿಗರ ಸಂಘದ ಅಧ್ಯಕ್ಷರ ವಿರುದ್ಧ ಆರೋಪ
ತುಮಕೂರು: ರಾಜ್ಯ ಒಕ್ಕಲಿಗರ ಸಂಘ ಸ್ವಾರ್ಥಕ್ಕಾಗಿ ಬಳಕೆಯಾಗುತ್ತಿದೆ. ಹಾಲಿ ರಾಜ್ಯ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, ಮಾಜಿ ನಿರ್ದೇಶಕರಾದ ಅಂಜಿನಪ್ಪ ಹಾಗೂ ಅವರ ಬೆಂಬಲಿಗರು ಸಂಘಕ್ಕೆ ದಾನಿಗಳೊಬ್ಬರು ನೀಡಿದ್ದ ಸುಮಾರು 96 ಎಕರೆ ಜಮೀನನ್ನು ಕಬಳಿಸಲು ಯತ್ನ ನಡೆಸಿದ್ದರು ಎಂದು ತುಮಕೂರು ಜಿಲ್ಲೆಯಿಂದ ನಿರ್ದೇಶಕ ಸ್ಥಾನಕ್ಕೆ ಸ್ವರ್ಧಿಸಿರುವ ಆರ್ . ಹನುಮಂತರಾಯಪ್ಪ ಆರೋಪಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘಕ್ಕೆ ದಾನಿಗಳು ನೀಡಿದ್ದ 96 ಎಕರೆಯನ್ನು ಕೆಂಚಪ್ಪಗೌಡ ಮತ್ತು ಅಂಜಿನಪ್ಪ ಅವರ ಬೆಂಬಲಿಗರು ಲೇಔಟ್ ಮಾಡಲು ಹೊರಟಿದ್ದರು. ಆದರೆ ತಾವು ಹಾಗೂ ಇತರರು ಸೇರಿ ಕಾನೂನು ಹೋರಾಟ ಮಾಡಿ ಸುಪ್ರೀಂಕೋರ್ಟ್ವರೆಗೂ ಹೋಗಿ ಸಂಘದ ಆಸ್ತಿಯನ್ನು ರಕ್ಷಣೆ ಮಾಡಿದ್ದೇವೆ.
ಹಾಲಿ 46 ಎಕರೆ ಜಮೀನು ಸಂಘದ ಹೆಸರಿನಲ್ಲಿ ಖಾತೆಯಾಗಿದೆ. ಉಳಿದ ಜಮೀನಿಗೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ದಾನಿಗಳು ನೀಡಿರುವ ಭೂಮಿಯನ್ನು ಸಂಘಕ್ಕೆ ಕೊಡಿಸುವ ನಿಟ್ಟಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಯಲಚವಾಡಿ ವಿರುದ್ಧ ಆರೋಪ: ತುಮಕೂರು ಜಿಲ್ಲೆಯಿಂದ ಸತತವಾಗಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗುತ್ತಿರುವ ವ್ಯಕ್ತಿಗಳು ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿಲ್ಲ. ತಮ್ಮ ವೈಯಕ್ತಿಕ ಕೆಲಸಗಳಿಗೆ ಸಂಘವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಹಿಂದಿನ ಅವಧಿಗೆ ಆಯ್ಕೆಯಾದ ಯಲಚವಾಡಿ ನಾಗರಾಜು ಜಿಲ್ಲಾ ಒಕ್ಕಲಿಗರ ಮಹಿಳಾ ವಸತಿ ನಿಲಯ ನಿರ್ವಹಣೆ ವಹಿಸಿಕೊಂಡಿದ್ದರೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಜಿಲ್ಲೆಯ ಸಮುದಾಯದ ಏಳಿಗೆಗೆ ಕೆಲಸ ಮಾಡುತ್ತಿಲ್ಲ ಎಂದು ಹನುಮಂತರಾಯಪ್ಪ ದೂರಿದರು.