ವಿದ್ಯಾರ್ಥಿಗಳ ಚಲ್ಲಾಟ; ಶಿಕ್ಷಕರಿಗೆ ಪ್ರಾಣ ಸಂಕಟ
ಕನ್ನಡಪ್ರಭ ವಾರ್ತೆ, ಕೋಲಾರ,ಜ.1
ಕಳೆದುಕೊಂಡಿರುವ ಅಮೂಲ್ಯವಾದ ಸಮಯವನ್ನು ಮತ್ತೆ ಗಳಿಸುವುದು ಕಷ್ಟ. ಆದರೆ, ಶ್ರದ್ಧೆ, ಗುರಿ, ಛಲ, ಆತ್ಮಾಭಿಮಾನ, ಪ್ರಾಮಾಣಿಕತೆ ಇದ್ದರೆ ಹೊಸತನಕ್ಕೆ ದಾರಿ ಕಂಡುಕೊಳ್ಳುವುದು ಸಮಸ್ಯೆಯೇನಲ್ಲ.
ಅಜ್ಞಾನ, ಅವಿವೇಕತನ, ಉದ್ಧಟತನದಿಂದ ಅನೇಕ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕೆ ತಾವೇ ಕಂಟಕ ತಂದುಕೊಂಡಿರುವುದುಂಟು. ತಪ್ಪು ಅರಿತು ಉತ್ತಮರ ಸಹವಾಸ ಹಾಗೂ ಮಾರ್ಗದರ್ಶನದಿಂದ ಪರಿವರ್ತನೆ ಆಗಿರುವ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ತಂದೆ, ತಾಯಿ ಹಾಗೂ ಗುರುಗಳ ಕಣ್ಣು ತಪ್ಪಿಸಿ ಶಾಲಾ-ಕಾಲೇಜುಗಳಿಗೆ ಚಕ್ಕರ್ ಹೊಡೆಯುವುದು, ಸ್ನೇಹಿತರ ಜೊತೆ ಮೋಟಾರ್ ಬೈಕ್, ಕಾರುಗಳಲ್ಲಿ ಪಾರ್ಕ್, ಬೆಟ್ಟ ಗುಡ್ಡಗಳಿಗೆ ಹೋಗಿ ನಿರ್ಜನ ಪ್ರದೇಶಗಳಲ್ಲಿ ಅಡಗಿಕೊಂಡು ಮೋಜು ಮಾಡುವುದು ಹೊಸ ವರ್ಷದ ಸಂಕಲ್ಪ ಎಂದೇ ಅನೇಕ ವಿದ್ಯಾರ್ಥಿಗಳು ಭಾವಿಸಿದಂತಿದೆ.
ಮನೆಯಲ್ಲಿ ಅಮ್ಮ, ಅಜ್ಜಿ, ಅಕ್ಕ ಅಥವಾ ಅಡುಗೆ ಮಾಡುವ ಆಂಟಿ, ಅಂಕಲ್ಗಳು ಮಾಡಿಕೊಡುವ ತಿಂಡಿಯನ್ನು ಡಬ್ಬಿಗೆ ಹಾಕಿಕೊಂಡು ಶಾಲಾ-ಕಾಲೇಜಿಗೆ ಹೊರಟ ಅನೇಕ ವಿದ್ಯಾರ್ಥಿಗಳು ಹೊಸ ವರ್ಷದ ಮೊದಲ ದಿನವಾದ ಮಂಗಳವಾರ ತರಗತಿಗಳಲ್ಲಿ ಕುಳಿತು ಶ್ರದ್ಧೆಯಿಂದ ಪಾಠ ಕಲಿತವರಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಉಳಿದವರು ಆಟೆಂಡನ್ಸ್ ಹಾಕಿ ಶಿಕ್ಷಕರ ಕಣ್ಣು ತಪ್ಪಿಸಿ ತರಗತಿ ಕಾಲಿ ಮಾಡಿ ತಮ್ಮನ್ನು ಕರೆದುಕೊಂಡು ಹೋಗಲು ಮೋಟಾರ್ಬೈಕ್,ಕಾರಿನಲ್ಲಿ ಬಂದವರ ಜೊತೆ ಮೆಲ್ಲಗೆ ತೆರಳಿ ಮೋಜು ಮಾಡಲು ಹೋದದ್ದು ನಿಗೂಢ ಸ್ಥಳಗಳಿಗೆ. ಪರೀಕ್ಷೆಗಳು ಸಮೀಪಿಸುತ್ತಿವೆ, ಸ್ಟ್ರೈಕು, ಬಂದ್ ಕಾರಣಗಳಿಂದ ತರಗತಿಗಳು ಸರಿಯಾಗಿ ನಡೆದಿಲ್ಲ, ಹಬ್ಬ-ಹರಿದಿನ, ಗಣ್ಯರ ಸಾವು ಇತ್ಯಾದಿ ಕಾರಣಗಳಿಂದಲೂ ಪಾಠ-ಪ್ರವಚನ ಸರಿಯಾಗಿ ನಡೆದಿಲ್ಲ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕಡೆ ಚಿಂತನೆ ಮಾಡದೆ ಮೋಜು-ಮಾಸ್ತಿನ ಕಡೆ ಆಸಕ್ತಿ ತೋರುವುದು ಎಷ್ಟು ಸರಿ ಎಂಬುದು ಪ್ರಶ್ನಾರ್ಹವಾಗಿದೆ.
ಕೋಲಾರ ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ನೂತನ ಸರ್ಕಾರಿ ಪಿಯು ಕಾಲೇಜು, ಮಹಿಳಾ ಕಾಲೇಜು ಬಳಿ ಆಯಾ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಕೈಯಲ್ಲಿ ಕೋಲು ಹಿಡಿದು ತರಗತಿಗಳಿಂದ ವಿದ್ಯಾರ್ಥಿಗಳು ಹೊರ ಹೋಗದಂತೆ ಕಾವಲು ಕಾದರು ರಂಗೋಲಿ ಕೆಳಗೆ ನುಸುಳಿದವರನ್ನು ನಿಯಂತ್ರಿಸಲು ಆಗಲಿಲ್ಲ.
ಕಾಲೇಜು ಮೈದಾನದಲ್ಲಿ ಸದ್ದು ಮಾಡಿದ ಮೋಟಾರ್ ಬೈಕ್ಗಳನ್ನು ಹಿಡಿಯಲು ಪೊಲೀಸರಿಂದಲೂ ಸಾಧ್ಯವಾಗಲಿಲ್ಲ. ಈ ನಡುವೆ ಕೆಲ ಯುವಕರು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಮಹಿಳಾ ಕಾಲೇಜು ರಸ್ತೆ, ಕೋರ್ಟ್ ಸರ್ಕಲ್, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮುಂತಾದ ಕಡೆ ಬೈಕ್ಗಳಲ್ಲಿ ವೀಲಿಂಗ್ ಮಾಡುತ್ತಾ ವಿದ್ಯಾರ್ಥಿಗಳನ್ನು ಆಕರ್ಷಿಸುವ ಮೂಲಕ ತಮ್ಮ ಪ್ರಾಣಕ್ಕೆ ಕಂಟಕ ತಂದುಕೊಳ್ಳುತ್ತಿದ್ದು ಪೊಲೀಸರು ವೀಲಿಂಗ್ ಮಾಡುವವರ ವಿರುದ್ಧ ಕಾನೂನು ಪ್ರಕಾರ ಕ್ರಮಕ್ಕೆ ಮುಂದಾಗದಿದ್ದರೆ ಜನರ ಪ್ರಾಣಕ್ಕೆ ಕುತ್ತು ಉಂಟಾಗಬಹುದು.
ಪ್ರಾಂಶುಪಾಲರು ಹೇಳಿದ್ದು
ಹೊಸ ವರ್ಷ ಆಚರಣೆ ಎಂದರೆ ಸ್ವೇಚ್ಛಾಚಾರ ಅಂತ ನಮ್ಮ ವಿದ್ಯಾರ್ಥಿಗಳು ಭಾವಿಸಿರುವಂತಿದೆ. ಈ ದಿನ ಮನ ಬಂದಂತೆ ವರ್ತಿಸುವ ಬದಲು ಕಳೆದ 365 ದಿನಗಳಲ್ಲಿ ಆಗಿರುವ ಲಾಭ-ನಷ್ಟಗಳ ಬಗ್ಗೆ ಆತ್ಮಾವಲೋಕನೆ ಮಾಡಿಕೊಳ್ಳುವ ಮೂಲಕ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಳ್ಳಬೇಕು. ನಮ್ಮ ವಿದ್ಯಾರ್ಥಿಗಳು ಇಂದು ತರಗತಿಗಳಿಗೆ ಚಕ್ಕರೆ ಹೊಡೆದು ಕಣ್ಣು ತಪ್ಪಿಸಿ ಹೋಗುತ್ತಿರುವುದು ಬೇಸರ ಉಂಟು ಮಾಡಿದೆ, ಹೊಸ ವರ್ಷದ ಮೊದಲ ದಿನ ತರಗತಿಗಳಲ್ಲಿ ಕುಳಿತು ಒಂದು ಗಂಟೆ ಹೆಚ್ಚಿನ ಪಾಠ-ಪ್ರವಚನಕ್ಕೆ ವಿದ್ಯಾರ್ಥಿಗಳು ನಮ್ಮ ಮೇಲೆ ಒತ್ತಡ ಹಾಕಿದ್ದರೆ ಸಂತೋಷವಾಗುತ್ತಿತ್ತು. ಆದರೆ, ಮನೆಗಳಲ್ಲಿ ಶಾಲಾ-ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಮೋಜು ಮಾಡಲು ಮುಂದಾಗಿರುವುದು ಸರಿಯಲ್ಲ. ತರಗತಿ ಬಿಟ್ಟು ಮಕ್ಕಳು ಹೊರ ಬರದಂತೆ ತಾವು ಕೋಲು ಹಿಡಿದು ನಿಂತರೂ ಅನೇಕ ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಮರೆತು ಹೋದರು. ಚಿಕ್ಕ ಮಕ್ಕಳಿಗೇ ಬುದ್ಧಿ ಹೇಳುವುದು ಈಗ ಕಷ್ಟವಾಗಿರವಾಗ ಇನ್ನು ಚಿಗರು ಮೀಸೆಯುಳ್ಳ ಹುಡುಗರನ್ನು ಮತ್ತು ಹೆಣ್ಣು ಮಕ್ಕಳನ್ನು ಹೇಗೆ ಸುಧಾರಿಸಲು ಸಾಧ್ಯ. ವಿದ್ಯಾರ್ಥಿಗಳಿಗೆ ಮನೆಗಳಲ್ಲಿ ಉತ್ತಮ ಸಂಸ್ಕಾರ ಕಲಿಸುವ ಕೆಲಸವಾಗದಿದ್ದರೆ ನಮ್ಮ ಸಂಸ್ಕೃತಿಯು ಉಳಿಯಲ್ಲ, ವಿದ್ಯಾರ್ಥಿಗಳ ಭವಿಷ್ಯವೂ ಸುಧಾರಿಸಲಾಗುವುದಿಲ್ಲ.
- ವೆಂಕಟಸ್ವಾಮಿ, ಪ್ರಾಂಶುಪಾಲ