ಸುದ್ದಿ ಸಂಕ್ಷೇಪ
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ
ಕೋಲಾರ: ಜಿಲ್ಲಾಡಳಿತ,ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಜ.2 ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಉದ್ಘಾಟಿಸುವರು ಎಂದು ಡಿಡಿಪಿಐ ಎಸ್.ವಿ. ಪದ್ಮನಾಭ್ ತಿಳಿಸಿದ್ದಾರೆ. ನಗರದ ಕ್ಲಾಕ್ಟ್ವರ್ ಸಮೀಪದ ಅಲ್-ಅಮಿನ್ ಶಾಲೆಗಳು ಹಾಗೂ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಣ್ಣ, ಮಧ್ಯಮ ಕೈಗಾರಿಕಾ ಸಚಿವ ಕೆಎಚ್. ಮುನಿಯಪ್ಪ ಉಪಸ್ಥಿತರಿದ್ದು, ಶಾಸಕ ವರ್ತೂರು ಪ್ರಕಾಶ್ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಶಿವಯೋಗಿಸ್ವಾವು, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಶಾಸಕರಾದ ರಮೇಶ್ಕುಮಾರ್, ಎಸ್.ಎನ್. ನಾರಾಯಣಸ್ವಾಮಿ, ಡಾ.ಜಿ. ಕೊತ್ತೂರು ಮಂಜುನಾಥ್, ಕೆ.ಎಸ್. ಮಂಜುನಾಥಗೌಡ, ವೈ.ರಾಮಕ್ಕ, ವೈ.ಎ. ನಾರಾಯಣಸ್ವಾಮಿ, ಡಿ.ಎಸ್. ವೀರಯ್ಯ, ಡಾ.ಎಸ್.ಆರ್. ಲೀಲಾ, ಜಿಪಂ ಉಪಾಧ್ಯಕ್ಷೆ ಅಲುವೇಲಮ್ಮ, ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೀಮೋಲ್ ಮೋಹನ್, ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾರಾಯಣಮೂರ್ತಿ, ಜಿಲ್ಲಾಧಿಕಾರಿ ಡಿ.ಕೆ. ರವಿ, ಸಿಇಒ ಎಸ್.ಎಂ. ಜುಲ್ಫಿಖಾರುಲ್ಲಾ ಎಸ್ಪಿ ರಾಮನಿವಾಸ್ ಸಾಪಟ್ ಸೇರಿದಂತೆ ಎಲ್ಲಾ ಜಿಪಂ,ತಾಪಂ ಸದಸ್ಯರು, ಶಿಕ್ಷಕರ,ನೌಕರರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿರುವರು.
ಕ್ಯಾಲೆಂಡರ್ ಬಿಡುಗಡೆ
ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ನೂತನ ವರ್ಷದ ಕ್ಯಾಲೆಂಡರನ್ನು ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನೂತನ ವರ್ಷದ ಶುಭಾಶಯ ಕೋರಿದರಲ್ಲದೆ, ನೌಕರರು ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಹೊಸ ವರ್ಷದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಕೊಡುಗೆ ನೀಡಲಿ ಎಂದು ಹಾರೈಸಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್, ಸರ್ಕಾರಿ ರಜೆ ದಿನಗಳು ಹಾಗೂ ನೌಕರರಿಗೆ ದಿನನಿತ್ಯ ಕರ್ತವ್ಯ ನಿರ್ವಹಣೆಗೆ ಅನುವಾಗುವ ರೀತಿಯಲ್ಲಿ ಮಾಹಿತಿ ಒದಗಿಸಲು ದಿನದರ್ಶಿಕೆ ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ನೌಕರರ ಸಂಘದ ಗೌರವಾಧ್ಯಕ್ಷ ರವಿಚಂದ್ರ, ಪ್ರಧಾನ ಕಾರ್ಯದರ್ಶಿ ಕೆ.ವಿ. ಅಶೋಕ್, ಖಜಾಂಚಿ ರಂಗಯ್ಯ, ಉಪಾಧ್ಯಕ್ಷ ಜಯರಾಂ, ತಹಸೀಲ್ದಾರ್ ನಾಗರಾಜ್, ಸಂಘದ ಕದಿರಪ್ಪ, ಲಕ್ಷ್ಮಣ್, ಹರಿನಾಥ್, ಜಯಪ್ರಕಾಶ್, ನಾಗರಾಜ್, ಮಾರುತಿ ಮತ್ತಿತರರು ಇದ್ದರು.
ಬೈಕ್ಸ್ಟ್ಯಾಂಡ್ ಆದ ಆರೋಗ್ಯ ಕೇಂದ್ರ ಆವರಣ
ಟೇಕಲ್: ಆರೋಗ್ಯ ಕೇಂದ್ರ ಮುಂಭಾಗದಲ್ಲಿ ಪ್ರತಿ ದಿನ ಬೈಕ್ಗಳನ್ನು ನಿಲ್ಲಿಸಿ ಈ ಪ್ರದೇಶ ಬೈಕ್ ಸ್ಟ್ಯಾಂಡಾಗಿ ಮಾಡಲಾಗಿದೆ. ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆ 6 ಗಂಟೆ ವರೆಗೂ ವಾಹನಗಳು ಇಲ್ಲೇ ಇರುತ್ತವೆ.
ಆರೋಗ್ಯ ಕೇಂದ್ರಕ್ಕೆ ಬರುವವರಿಗೆ ಇದರಿಂದ ತೊಂದರೆಯಾಗಿದ್ದು ತುರ್ತು ಚಿಕಿತ್ಸೆಗಾಗಿ ಬರುವ 108 ಆ್ಯಂಬುಲೆನ್ಸ್ಗೂ ಆಸ್ಪತ್ರೆಯ ಒಳಬರುವುದಕ್ಕೆ ತೊಂದರೆಯಾಗಿದೆ ಎಂದು ಜನತೆ ಆರೋಪಿಸಿದ್ದು ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಯಾಗಲಿ, ವೈದ್ಯರಾಗಲಿ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.