ಹೊಸ ವರ್ಷ ಸಂಭ್ರಮದಲ್ಲಿ ವಿಕಲಚೇತನರು ಲಕ ಲಕ...
ಕನ್ನಡಪ್ರಭ ವಾರ್ತೆ, ಕೋಲಾರ,ಜ.1
ಹೊಸ ವರ್ಷದ ಸ್ವಾಗತಕ್ಕಾಗಿ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಕಲಚೇತನ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಗಮನ ಸೆಳೆದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಾಗೃತಿ ಸೇವಾ ಸಂಸ್ಥೆ, ಬೆಂಗಳೂರು ಮಾಂಟೋಸ್ಸರಿ ಶಾಲೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕಲಚೇತನ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಗೆದ್ದರು, ನೃತ್ಯ, ಹಾಡುಗಳ ಮೂಲಕ ಸಭಿಕರ ಮನ ಗೆದ್ದರು.
ಮುಖ್ಯ ಅತಿಥಿ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ರೇಣುಕಾ ಪ್ರಸಾದ್, ಕೇಕ್ ಕತ್ತರಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರಿದ ಮಕ್ಕಳಿಗೆ ಶುಭ ಕೋರಿ ಮಾತನಾಡಿ, ವಿಕಲಾಂಗದರೊಂದಿಗೆ ಸಾಂಸ್ಕೃತಿಕ ಸಂಭ್ರಮ ಆಚರಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ದೈಹಿಕ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಿರುವ ಮಕ್ಕಳ ಸಬಲೀಕರಣಕ್ಕೆ ತಮ್ಮ ಜೀವನವನ್ನು ಮೂಡುಪಾಗಿಟ್ಟಿರುವ ಸರಕಾರೇತರ ಸಂಸ್ಥೆಗಳು ಮತ್ತು ಸ್ವಯಂ ಸೇವಕರ ಕಾರ್ಯ ಶ್ಲಾಘನೀಯ ಎಂದರು.
ವಿಕಲಾಂಗದರಲ್ಲೂ ಅನೇಕ ಪ್ರತಿಭಾವಂತರಿದ್ದಾರೆ, ಆದರೆ ಅವರಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ಅಗತ್ಯ ವೇದಿಕೆ ಇಲ್ಲವಾಗಿದೆ ಎಂದ ಅವರು, ಇಂತಹ ವೇದಿಕೆ ಕಲ್ಪಿಸುವ ಕಾರ್ಯವನ್ನು ಸ್ವಯಂ ಸೇವಾ ಸಂಸ್ಥೆಗಳು ಮಾಡಬೇಕೆಂದು ಸಲಹೆ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಆಯ್ಕೆಯಾದ ವಿಕಲಾಂಗದರಿಗೆ ಬಹುಮಾನ ವಿತರಿಸಿದ ಜಿಲ್ಲಾಧಿಕಾರಿ ಡಿ.ಕೆ.ರವಿ, ಹೊಸ ವರ್ಷದಲ್ಲಿ ಹೊಸ ಜೀವನದೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ ಎಂದು ಹಾರೈಸಿದರು.
ಸಮಾರಂಭದಲ್ಲಿ ನಗರದ ಕುರುಬರಪೇಟೆಯ ಮಂದಾರ ವಸತಿ ಶಾಲೆಯ ವಿದ್ಯಾರ್ಥಿನಿ ಎರಡೂ ಕಾಲಿಲ್ಲದ ಗೌರಮ್ಮ ನೀಡಿದ ಸೋಲೋ ನೃತ್ಯ ಪ್ರೇಕ್ಷಕರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಸ್ವಾಗತಿಸಿದ ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್. ಧನರಾಜ್, ವಿಕಲಾಂಗದ ಮಕ್ಕಳಲ್ಲಿ ನಮ್ಮನ್ನು ಇತರರು ಕೀಳಿರಿಮೆಯಿಂದ ನೋಡುತ್ತಿದ್ದಾರೆಂಬ ಭಾವನೆ ಹೋಗಲಾಡಿಸಲು ಈ ಮಕ್ಕಳೊಂದಿಗೆ ಎಲ್ಲಾ ಹಬ್ಬಗಳನ್ನು ಆಚರಿಸುವ ಸಣ್ಣ ಪ್ರಯತ್ನವನ್ನು ತಮ್ಮ ಸಂಸ್ಥೆ ಮಾಡುತ್ತಿದೆ ಎಂದು ತಿಳಿಸಿದರು.
ನ್ಯಾಯಾಧೀಶರಾದ ಸಂಗಣ್ಣ ಬಿ. ಪಾಟೀಲ್, ಮಲ್ಲಿಕಾರ್ಜುನ ಕಿಣಿಕೇರಿ, ಬಿ.ವಿ. ರೇಣುಕಾ, ಕೆಂಬಾಲಯ್ಯ, ನಟೇಶನ್, ಕುಮಾರ್, ಶಕುಂತಲಾ, ಜಿಪಂ ಸಿಇಒ ಜುಲ್ಫಿಖರುಲ್ಲಾ, ವಕೀಲರ ಸಂಘದ ಅಧ್ಯಕ್ಷ ಟಿ.ಎಂ. ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಪಿ.ನಾರಾಯಣಸ್ವಾಮಿ, ಬೆಂಗಳೂರು ಮಾಂಟೋಸರಿ ಮುಖ್ಯ ಶಿಕ್ಷಕಿ ರತ್ನಕುಮಾರಿ, ಕೆ.ಸಿ.ಟಿವಿ ರವಿ ಇದ್ದರು.