ಆಟೋ, ದ್ವಿಚಕ್ರ ವಾಹನ ಡಿಕ್ಕಿ: ವಿದ್ಯಾರ್ಥಿನಿ ಸಾವು
ಚಿಂತಾಮಣಿ: ದ್ವಿಚಕ್ರ ವಾಹನ ಮತ್ತು ಆಟೋ ಎರಡೂ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಿಂದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟು, ಮತ್ತಿಬ್ಬರು ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಕರಪ್ಪಲ್ಲಿ ಅಂಡರ್ಪಾಸ್ ಬಳಿ ಬುಧವಾರ ಸಂಜೆ ನಡೆದಿದೆ.
ನಗರದ ಬಂಬೂ ಬಜಾರ್ ರಸ್ತೆಯ ಕೀರ್ತಿನಗರ ನಿವಾಸಿಗಳಾದ ತಂದೆ ನಯಾಜ್, ಅಳಿಯ ಶಬೀರ್, ಮಕ್ಕಳಾದ ರೇಷಿಮಾ,ಆಯಿಷಾ ಎಂಬವರು ಕುಟುಂಬ ಸಮೇತರಾಗಿ ನೂತನ ವರ್ಷದ ಪ್ರಯುಕ್ತ ತಾಲೂಕಿನ ಮುರುಗಮಲ್ಲ ಗ್ರಾಮದಲ್ಲಿ ನೆಲೆಸಿರುವ ಪ್ರಸಿದ್ಧ ಅಮ್ಮಾಜಾನ್ ಬಾಬಾಜಾನ್ ದರ್ಗಾಗೆ ಪ್ರಾರ್ಥನೆ ಸಲ್ಲಿಸಿ ನಂತರ ಹಿಂತಿರುಗಿ ಆಟೋದಲ್ಲಿ ಬರುವಾಗ ಕರಪ್ಪಲ್ಲಿ ಬಳಿ ಇರುವ ರೈಲ್ವೇ ಅಂಡರ್ಪಾಸ್ ಬಳಿ ದ್ವಿಚಕ್ರ ವಾಹನವೊಂದು ಅತಿವೇಗ ಮತ್ತು ಅಜಾಗರೂಕತೆಯಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ರೇಷಿಮಾ(20) ಸಾವನ್ನಪ್ಪಿದ್ದು, ನಯಾಜ್ ಮತ್ತು ಆಯಿಷಾ ಹಾಗೂ ವಾಹನ ಸವಾರ ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೆಷಿಮಾ ನಗರದ ಕಾಲೇಜೊಂದರಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿನಿಯಾಗಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಈ ಪ್ರಕಟಣಕ್ಕೆ ಸಂಬಂಧಿಸಿ ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.