ಉದ್ಯಾನವನ ಅತಿಕ್ರಮಣ ಖಂಡಿಸಿ ಪ್ರತಿಭಟನೆ
ಕೆಜಿಎಫ್: ಉದ್ಯಾನವನಕ್ಕಾಗಿ ಮೀಸಲಿಟ್ಟಿದ್ದ ಸ್ಥಳದಲ್ಲಿ ಅಕ್ರಮವಾಗಿ ನಿವೇಶನ ನಿರ್ಮಾಣವಾಗುತ್ತಿರುವುದನ್ನು ವಿರೋಧಿಸಿ ನಿವಾಸಿಗಳು ಸುಬಾಷ್‌ನಗರ ಬಡಾವಣೆಯಲ್ಲಿ ರಸ್ತೆತಡೆ ನಡೆಸಿದರು.
ಕೆಜಿಎಫ್‌ನ ಸುಬಾಷ್‌ನಗರದ ಬಡಾವಣೆಯಲ್ಲಿ ಅಂದಿನ ಮಾಜಿ ಶಾಸಕ ದಿವಂಗತ ಟಿ.ಎಸ್. ಮಣಿ 1989ರಲ್ಲಿ ಉದ್ಯಾನವನ ಉದ್ಘಾಟಿಸಿದ್ದರು. ಅಲ್ಲದೆ ಮಾಜಿ ನಗರಸಭಾ ಸದರೊಬ್ಬರು ಉದ್ಯಾನವನ ಸ್ಥಳದಲ್ಲಿ ನಿವೇಶನ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿರುವುದಾಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಕೆಜಿಎಫ್ ನಗರಸಭೆ ಆಯುಕ್ತರಿಗೆ ಈ ಬಗ್ಗೆ ಕ್ರಮಕ್ಕೆ ಮುಂದಾಗುವಂತೆ 2011ರಲ್ಲಿ ಪತ್ರ ಬರೆದಿದ್ದಾರೆ. ಆದರೂ ಬಡಾವಣೆಯ ನಿರ್ಮಾಣ ಹಾಗೂ ನಕ್ಷೆಯಲ್ಲಿ ಉದ್ಯಾನವನಗಳ ಅಕ್ರಮ ಒತ್ತುವರಿ ಮಾಡಲಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಈ ವೇಳೆ ಮಾತನಾಡಿದ ಕೋಲಾರ ಜಿಲ್ಲಾ ಸಫಾಯಿ ಕರ್ಮಚಾರಿಗಳ ಹೋರಾಟ ಸಮಿತಿ ಅಧ್ಯಕ್ಷ ಡಿ.ನಾಗರಾಜ್ ಸುಬಾಷ್‌ನಗರದ ಬಾಡಾವಣೆಯಲ್ಲಿ ಉದ್ಯಾನವಕ್ಕಾಗಿ 70-100 ಅಳತೆಯ ಸ್ಥಳವನ್ನು ಮೀಸಲಿಟ್ಟಿದ್ದು ಈ ನಿವೇಶನವನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಕಟ್ಟಡ ನಿರ್ಮಾಣವಾಗುತ್ತಿದ್ದರು ನಗರಸಭಾ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದನ್ನು ಖಂಡಿಸಿದ್ದಾರೆ. ಅಲ್ಲದೆ ವಕೀಲರ ಮೂಲಕ ಸೂಕ್ತ ದಾಖಲೆಗಳನ್ನು ನೀಡದೆ ಇರುವುದರ ಬಗ್ಗೆ ಕೆಲ ಅನುಮಾನಗಳಿಗೆ ಕಾರಣವಾಗಿದೆ. ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು, ಅಧಿಕಾರಿಗಳು ಈ ಬಗ್ಗೆ ಸೂಕ್ತ ಮಾಹಿತಿ ಮತ್ತು ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಪರಿಶೀಲಿಸಿದ ನಂತರ ಮುಂದಿನ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ರಾಬರ್ಟ್‌ಸನ್‌ಪೇಟೆ ಠಾಣಾ ವೃತ್ತನಿರೀಕ್ಷಕ ಲಕ್ಷ್ಮೀನಾರಾಯಣ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ, ಗಣೇಶ್‌ಪುರಂ ವಾರ್ಡ್ ನಗರಸಭಾ ಸದಸ್ಯ ನಟರಾಜನ್, ನಗರಸಭೆ ಅಧಿಕಾರಿ ಜಯಹರಿ, ರಾಬರ್ಟ್‌ಸನ್‌ಪೇಟೆ ಠಾಣಾ ಪಿಎಸ್‌ಐ ರಂಗಸ್ವಾಮಯ್ಯ, ಸಫಾಯಿ ಕರ್ಮಚಾರಿಗಳ ಹೋರಾಟ ಸಮಿತಿಯ ಉಪಾಧ್ಯಕ್ಷೆ ಮಣಿಮಾಲಾ, ಸದಸ್ಯರಾದ ರಾಮು, ವಿಜಯಕುಮಾರ್, ರವಿ, ಸುಬ್ರಮಣಿ, ರಾಜೇಂದ್ರ, ನಿವಾಸಿಗಳಾದ ನರಸಯ್ಯ, ಮುರಳಿ, ಪ್ರಭು, ಶಂಕರ್, ಸುರೇಶ್‌ಕುಮಾರ್, ಮಂಜುಳಾ, ಸುಕನ್ಯ, ಚಂದ್ರಿಕ ಇದ್ದರು.