ತಮಿಳ್ನಾಡಿಂದ ತರಿಸಿ ಅಕ್ರಮವಾಗಿ ದಾಸ್ತಾನಿಟ್ಟಿದ್ದ ಪಡಿತರ ಅಕ್ಕಿ ಪತ್ತೆ
ಬಂಗಾರಪೇಟೆ: ಅಕ್ರಮವಾಗಿ ತಮಿಳುನಾಡಿನಿಂದ ತರಿಸಿ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿಯನ್ನು ರೈತ ಸಂಘದ ಮುಖಂಡರು ಹಿಡಿದು ಆಹಾರ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿರುವ ಪ್ರಕರಣ ಗುರುವಾರ ನಡೆದಿದೆ.
ಪಡಿತರ ಅಕ್ಕಿ ಕೊಳ್ಳುವುದು ಮತ್ತು ಮಾರುವುದು ಕಾನೂನು ಬಾಹಿರ ಎಂದು ಸರ್ಕಾರಗಳು ಸಾರಿ ಸಾರಿ ಹೇಳುತ್ತಿದ್ದರೂ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಎಗ್ಗಿಲ್ಲದೆ ನಡೆಯುತ್ತಲೆ ಇದೆ. ಇತ್ತೀಚೆಗೆ ತಮಿಳುನಾಡಿನ ಪಡಿತರ ಜಾಗೃತಾ ದಳದ ಪೊಲೀಸರು ಪಟ್ಟಣಕ್ಕೆ ಬಂದು ಯಾವುದೇ ಕಾರಣಕ್ಕೂ ತಮಿಳುನಾಡಿನಿಂದ ಬರುವ ಪಡಿತರ ಅಕ್ಕಿಯನ್ನು ಖರೀದಿಸಬಾರದು ಎಂದು ಅಕ್ಕಿ ಗಿರಣಿ ಮಾಲೀಕರಿಗೆ ಎಚ್ಚರಿಕೆ ಕೊಟ್ಟು ಹೋಗಿದ್ದರು. ನಂತರ ಯಾವುದೇ ಅಡೆತಡೆಯಿಲ್ಲದೆ ತಮಿಳುನಾಡಿನಿಂದ ಅಕ್ಕಿ ಬರುತ್ತಲೆ ಇದೆ. ತಮಿಳುನಾಡಿನಲ್ಲಿ ಪಡಿತರ ಚೀಟಿದಾರರಿಗೆ ಉಚಿತವಾಗಿ ಅಕ್ಕಿ ನೀಡುವುದರಿಂದ ಅಕ್ಕಿಯನ್ನು ರೈಲು ಮತ್ತು ಲಾರಿಗಳಲ್ಲಿ ಸಾಗಾಣೆ ಮಾಡಿಕೊಂಡು ಬಂದು ಇಲ್ಲಿ ಮಾರಾಟ ಮಾಡುವರು.
ಆರ್ಎಂಎಸ್ ಬಳಿಯಿರುವ ಭಾರತ್ ಟ್ರೇಡಿಂಗ್ ಕಂಪನಿ ಅಂಗಡಿಯಲ್ಲಿ ಸುಮಾರು 50ಕೆಜಿ ತೂಕದ 250 ಮೂಟೆಗಳು ತಮಿಳುನಾಡಿನಿಂದ ಬಂದಿದ್ದು ಅಕ್ಕಿಯನ್ನು ಬೇರೆ ಚೀಲಕ್ಕೆ ಬದಲಾಯಿಸಿ ಬೇರೆಡೆ ಸಾಗಿಸಲು ಟೆಂಪೋದಲ್ಲಿ ಲೋಡ್ ಮಾಡುತ್ತಿದ್ದಾಗ ರೈತ ಸಂಘದ ಮುಖಂಡರು ಪತ್ತೆ ಹಚ್ಚಿದರು. ನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ಕೋಲಾರ ಆಹಾರ ಇಲಾಖೆಯ ಉಪ ನಿರ್ದೇಶಕಿ ಗಿರಿಜಾದೇವಿ ಬಂದು ಪರಿಶೀಲಿಸಿದರು. ಮೇಲ್ನೋಟಕ್ಕೆ ಇದು ಪಡಿತರ ಅಕ್ಕಿ ಎಂದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಕ್ಕಿಯನ್ನು ಸ್ಯಾಂಪಲ್ ಪಡೆದು ಲ್ಯಾಬ್ ಟೆಸ್ಟಿಂಗ್ಗೆ ಕಳುಹಿಸಿ ಅದರ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕನ್ನಡಪಭಕ್ಕೆ ತಿಳಿಸಿದರು.
ಆಹಾರ ಇಲಾಖೆಯ ಉಪ ನಿರ್ದೇಶಕಿ ಸ್ಥಳಕ್ಕೆ ಬರುತ್ತಿದ್ದಂತೆ ಅಂಗಡಿ ಮಾಲೀಕರು ಪರಾರಿಯಾದರು. ಅಕ್ಕಿ ಪತ್ತೆಯಾಗಿದೆ ಆದರೆ ಇದರ ಮಾಲೀಕರು ಯಾರು ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರ ಸಿಗದಿದ್ದಾಗ ಆಕ್ರೋಶಗೊಂಡ ಅಧಿಕಾರಿ ಗಿರಿಜಾದೇವಿ ಅಂಗಡಿಗೆ ಬೀಗ ಮುದ್ರೆ ಹಾಕಿಸಿದರು. ಪಡಿತರ ಅಕ್ಕಿಯನ್ನು ಮಾರುವುದು ಮತ್ತು ಕೊಳ್ಳುವುದೂ ಕಾನೂನು ಬಾಹಿರವಾಗಿರುವುದರಿಂದ ಇಂತಹ ವ್ಯಾಪಾರಕ್ಕೆ ಕೈ ಹಾಕಬಾರದು ಎಂದು ತಿಳಿಸಿದರು.