ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲು ಆಗ್ರಹ
ಬಂಗಾರಪೇಟೆ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ಫುಟ್‌ಪಾತ್‌ಗಾಗಿ ಮೀಸಲಿಟ್ಟಿದ್ದ ಜಾಗವನ್ನು ಅಂಗಡಿ ಮಾಲಿಕರು ಆಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳಿಗೆ ಪ್ರತಿ ನಿತ್ಯ ಕಿರಿಕಿರಿ ಆಗುತ್ತಿದ್ದು ಮುಕ್ತ ಸಂಚಾರಕ್ಕೆ ಒತ್ತುವರಿ ತೆರವುಗೊಳಿಸಲು ಮುಂದಾದಾಗ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಪಟ್ಟಣದ ಜನ ಸಂಖ್ಯೆಯಗೆ ತಕ್ಕಂತೆ ಮೂಲ ಸೌಲಭ್ಯಗಳು ಇಲ್ಲ. ಪುರಸಭೆ ಇದ್ದು ಇಲ್ಲದಂತಾಗಿದೆ. ಪಟ್ಟಣದ ಯಾವುದೇ ಪ್ರಮುಖ ರಸ್ತೆಗಳಲ್ಲಿ ಸಾಮಾನ್ಯ ಜನರು ಒಡಾಟಕ್ಕೆ ಅವಕಾಶವೇ ಇಲ್ಲದಂತಾಗಿದೆ. ರಸ್ತೆಗಳಿದ್ದರೆ ಫುಟ್‌ಪಾತ್ ಇರಲೇಬೇಕು, ಆದರೆ ಪಟ್ಟಣದಲ್ಲಿ ಅವು ಮಾಯವಾಗಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಬಜಾರ್ ರಸ್ತೆ ಮತ್ತು ಸರ್ಕಾರಿ ಆಸ್ಪತ್ರೆ ಹಿಂಬಾಗದ ರಸ್ತೆಗಳಲ್ಲಿ ಜನರು ಸಂಚರಿಸಲು ಅಸಾಧ್ಯ. ಇನ್ನು ಹಬ್ಬ ಹರಿದಿನಗಳಲ್ಲಿ ಹೇಳಲಿಕ್ಕೆ ಸಾಧ್ಯವಿಲ್ಲ. ಪುರಸಭೆ ಈ ಹಿಂದೆ ಕುರುಡಾಗಿತ್ತು ಈಗ ಒಮ್ಮೆಲೆ ತೆರವುಗೊಳಿಸಲು ಮುಂದಾಗಿರುವುದು ವ್ಯಾಪಾರಿಗಳನ್ನು ಕೆರಳಿಸಿದೆ. ಪುರಸಭೆ ಆಡಳಿತ ಮಂಡಳಿ ಇನ್ನು ಅಧಿಕಾರದಲ್ಲಿ ಕೂರದ ಕಾರಣ ಒತ್ತುವರಿ ಬಗ್ಗೆ ಕ್ರಮಕೈಗೊಳ್ಳಲು ಆಗುತ್ತಿಲ್ಲ, ನೂತನ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕ್ಷೇತ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡುತ್ತಿರುವುದರಿಂದ ಪಟ್ಟಣದಲ್ಲಿ ಒತ್ತುವರಿಯಾಗಿರುವ ಪಾದಚಾರಿಗಳ ಜಾಗವನ್ನು ತೆರವುಗೊಳಿ ಸಣ್ಣ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ನಿಗದಿಪಡಿಸಲು ಗಮನಹರಿಸಿ ಪಾದಚಾರಿಗಳು ಮುಕ್ತ ಸಂಚಾರಕ್ಕೆ ಅನುವುಮಾಡಿಕೊಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.