ಮನೆಗಳ್ಳನ ಬಂಧನ; 6 ಲಕ್ಷ ಮೌಲ್ಯದ ಮಾಲು ವಶ
ಕೋಲಾರ: ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಗರಠಾಣೆ ಪೊಲೀಸರು ಗುರುವಾರ ಬೆಳಿಗ್ಗೆ ಬಂಧಿಸಿ ಸುಮಾರು 6 ಲಕ್ಷ ರು. ಬೆಲೆ ಬಾಳುವ ನಗ-ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕೋಲಾರದ ಷಾಹಿನ್‌ಷಾ ನಗರದ ರೋಷನ್ ಜಮೀರ್ ಆಲಿಯಾಸ್ ಜಮೀರ್ ಎಂಬುವನಾಗಿದ್ದು, ಕಳೆದ ಹಲವಾರು ತಿಂಗಳಲ್ಲಿ ಅನೇಕ ಮನೆಗಳಲ್ಲಿ ಕಳ್ಳತನ ಮಾಡಿ ತಲೆಮಾರಿಸಿಕೊಂಡಿದ್ದ. ಆರೋಪಿಯನ್ನು ಬಂಧಿಸಲು ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಲಾಗಿತ್ತು. ಆರೋಪಿ ಕಳೆದ ವರ್ಷ ಮೇ 22 ರಂದು ರಾತ್ರಿ ಷಾಹೀನ್‌ಷಾ ನಗರದ ಫಾರೂಕ್ ಎಂಬುವವರ ಮನೆಯಲ್ಲಿ ಕಳುವು ಮಾಡಿದ್ದ ಸುಮಾರು 5 ಲಕ್ಷ ರು. ಬೆಲೆಬಾಳುವ 273 ಗ್ರಾಂ ತೂಕದ ಚಿನ್ನದ ಒಡವೆಗಳು, ಮಹಾಲಕ್ಷ್ಮಿ ಬಡಾವಣೆಯ ಸುಬ್ಬಲಕ್ಷ್ಮಮ್ಮ ಮನೆಯಲ್ಲಿ ಕಳುವು ಮಾಡಿದ್ದ ಸುಮಾರು 80 ಸಾವಿರ ರು. ಬೆಲೆ ಬಾಳುವ 2 ಕೆ.ಜಿ. ಬೆಳ್ಳಿ ಆಭರಣಗಳನ್ನು ಮತ್ತು ಶಹೀನಾ ತಾಜ್ ಮನೆಯಲ್ಲಿ ಕಳವು ಮಾಡಿದ್ದ 20 ಸಾವಿರ ರು. ಬೆಲೆ ಬಾಳುವ ಒಂದು ಲ್ಯಾಪ್‌ಟಾಪನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು ಆರೋಪಿಯ ಜತೆ ಶಾಮೀಲಾಗಿದ್ದ ಅಕ್ಬರ್‌ಖಾನ್ ಮತ್ತು ಇಸ್ಮಾಯಿಲ್ ಖಾನ್ ಅವರನ್ನು ಕಳೆದ ನ.10 ರಂದು ಬಂಧಿಸಿ ಸುಮಾರು 5.50 ಲಕ್ಷ ಬೆಲೆ ಬಾಳುವ ಬಂಗಾರದ ಒಡವೆಗಳು, 40 ಸಾವಿರ ರು.ಗಳ ಎಲೆಕ್ಟ್ರಾನಿಕ್ ಉಪಕರಣ, ಕೈ ಗಡಿಯಾರವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿ ರೋಷನ್ ಜಮೀರ್ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಬಂಧಿಸಲು ಎಸ್ಪಿ ಡಾ. ರಾಮ್ ನಿವಾಸೆ ಸಪಟ್, ಎಎಸ್ಪಿ ಐ.ಎಂ. ಜಮೀರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಅಶೋಕ್‌ಕುಮಾರ್, ಸಿಪಿಐ ಶಿವಕುಮಾರ್, ಪಿಎಸ್‌ಐ ಕೆ. ಚಂದ್ರಪ್ಪ, ಸಿಬ್ಬಂದಿ ಹಮೀದ್‌ಖಾನ್, ಎಂ.ಡಿ. ನಾರಾಯಣಪ್ಪ ಮಂಜುನಾಥ್, ರಮೇಶ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.