ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಕ್ಷಭೇದ ಬಿಟ್ಟು ಕೈಜೋಡಿಸಿದರೆ ಅಭಿವೃದ್ಧಿ

Mainashree
Updated On : 3 Jan 2014, 11:01 am

ಬಾಗೇಪಲ್ಲಿ: ರಾಜಕಾರಣ ಮತ್ತು ಪಕ್ಷಭೇದ ಬಿಟ್ಟು ಎಲ್ಲರೂ ಕೈಜೋಡಿಸಿದಾಗ ಮಾತ್ರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಪುರಸಭೆ ವತಿಯಿಂದ ಏರ್ಪಡಿಸಲಾಗಿದ್ದ 2012-13 ನೇ ಸಾಲಿನ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ನಗರೋತ್ಥಾನ ಭಾಗ-2 ಯೋಜನೆಯಡಿಯಲ್ಲಿ 5 ಕೋಟಿ ರು. ವೆಚ್ಚದಲ್ಲಿ 8 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಯಾರೇ ಆಗಲಿ ಯಾವುದೇ ಕಾರಣಕ್ಕೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ, ರಾಜಕೀಯವನ್ನು ಕೇವಲ ಚುನಾವಣೆಗೆ ಸೀಮಿತಗೊಳಿಸಬೇಕು. ಉಳಿದ ಸಮಯದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವಂತಹ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪಟ್ಟಣದ ಪುರಸಭೆಯ ವ್ಯಾಪ್ತಿಯ ಕೆಲ ಆಸ್ತಿಪಾಸ್ತಿಗಳು ಪರಗೋಡು ಮತ್ತು ಘಂಟಂವಾರಪಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವುದರಿಂದ ಅವುಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಪಟ್ಟಣಕ್ಕೆ ಸಮೀಪದಲ್ಲಿರುವ ಪರಗೋಡುನಿಂದ( ರಾ.ಹೆ-7) ಕಾರುಕೂರು ಕ್ರಾಸ್ ವರೆವಿಗೂ ಬೈಪಾಸ್ ರಸ್ತೆ ಕಾಮಗಾರಿ 3 ಕೋಟಿ ರು. ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದೆ.ಪಟ್ಟಣದ ಮುಖ್ಯ ರಸ್ತೆ ಕಾಮಗಾರಿಗೆ 14 ಕೋಟಿ ರೂಗಳ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಿದ್ದು ಈಗಾಗಲೇ 10 ಕೋಟಿ ರು. ಬಿಡುಗಡೆಯಾಗಿದೆ. ಉಳಿದ 4 ಕೋಟಿ ರೂಗಳು ಅತೀ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದರು.
ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ ನಡೆಯುವ ಯಾವುದೇ ಕಾಮಗಾರಿಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬರಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ ಶಾಸಕರು,ಫುಟ್ ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಲು ಸರ್ಕಾರದ ಆದೇಶವಿರುವ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಸ್ಥಳಾವಕಾಶವನ್ನು ಶೀಘ್ರದಲ್ಲಿ ಕಲ್ಪಿಸುವಂತಹ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಸರಕಾರದಿಂದ ಅನುದಾನ ತರುವುದು ನನ್ನ ಜವಾಬ್ದಾರಿ, ಇದನ್ನು ಪ್ರಾಮಾಣಿಕವಾಗಿ ಖರ್ಚು ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಕಾಮಗಾರಿಗಳ ಗುಣಮಟ್ಟದ ವಿಚಾರದಲ್ಲಿ ರಾಜೀ ಪ್ರಶ್ನೆಯೇ ಇಲ್ಲ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ಎ. ಪದ್ಮ, ಜಿಲ್ಲಾ ಸಮುದಾಯ ಅಭಿವೃದ್ಧಿ ತಜ್ಞ ವೆಂಕಟಾಚಲಪತಿ, ಪುರಸಭೆ ಮುಖ್ಯಾಧಿಕಾರಿ ಆರ್.ಶ್ರೀಕಾಂತ್, ಲೋಕೋಪಯೋಗಿ ಇಲಾಖೆ ಎಇಇ ಜೆ. ಕೃಷ್ಣಮೂರ್ತಿ, ಪುರಸಭೆ ಸದಸ್ಯರಾದ ಮಮತ ನಾಗರಾಜರೆಡ್ಡಿ, ಎ.ನಂಜುಂಡ, ಬಿ.ಎನ್. ಶ್ರೀನಿವಾಸ, ಮದುಸೂದನರೆಡ್ಡಿ, ಚೆನ್ನಮ್ಮ, ಭಾಸ್ಕರ್, ಅಪ್ಪಯ್ಯ ಬಾಬು, ಆ.ನ.ಮೂರ್ತಿ, ನಲ್ಲಪ್ಪ, ಗಂಗರಾಜು ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement