ಮಲ ಹೊರಿಸಿದ ಪ್ರಕರಣ: ಒಬ್ಬರ ಸೆರೆ
ಬಾಗೇಪಲ್ಲಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶೌಚಾಲಯದ ಗುಂಡಿ ಸ್ವಚ್ಛಗೊಳಿಸಿ ಮಲವನ್ನು ಹೊರಲು ಕೂಲಿ ಕಾರ್ಮಿಕರಿಗೆ ಪ್ರೇರಣೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಸಂಬಂಧಪಟ್ಟ ಗುತ್ತಿಗೆದಾರರನ್ನು ಬಂಧಿಸಲು ಬಲೆ ಬೀಸಿದ್ದಾರೆ.
ಜ.1 ರಂದು ಕನ್ನಡಪ್ರಭದಲ್ಲಿ ವೈದ್ಯರೇ ನಿಂತು ಮಲ ಹೊರಿಸಿದರು ಎಂಬ ಶೀರ್ಷಿಕೆಯ ಸುದ್ದಿಯ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕಾರ್ಮಿಕರಿಂದ ಮಲ ಹೊರಿಸಿರುವುದರ ಬಗ್ಗೆ ಬೆಳಕು ಚೆಲ್ಲಲಾಗಿತ್ತು.
ಇದರಿಂದ ಎಚ್ಚೆತ್ತುಕೊಂಡ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮಂಜನಾಯ್ಕ್ ಇಲ್ಲಿನ ಪೊಲೀಸ್ ಠಾಣೆಗೆ ಗುತ್ತಿಗೆದಾರ ಮುನಿರಾಜು ಮತ್ತು ಕಾರ್ಮಿಕರಿಂದ ಮಲ ಹೊರಿಸಿದ ಶ್ರೀಧರ್ ಎಂಬವರ ವಿರುದ್ಧ ದೂರನ್ನು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಪೊಲೀಸರು ಶುಕ್ರವಾರ ಶ್ರೀಧರ್ನನ್ನು ಬಂಧಿಸಿ ತಾಲೂಕು ದಂಡಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.
ಆಸ್ಪತ್ರೆಗೆ ಸಮಿತಿ ಭೇಟಿ; ಪರಿಶೀಲನೆ
ಬಾಗೇಪಲ್ಲಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕಾರ್ಮಿಕರಿಂದ ಮಲ ಹೊರಿಸಿದ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕಿ ಎಂ. ಪದ್ಮ ಹಾಗೂ ಸಮಿತಿಯ ಸದಸ್ಯ ಮಹಾಲಿಂಗಯ್ಯರವರನ್ನೊಳಗೊಂಡ ತಂಡ ಶುಕ್ರವಾರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿತು.
ಕನ್ನಡಪ್ರಭದೊಂದಿಗೆ ಮಾತನಾಡಿದ ರಾಜ್ಯ ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕಿ ಎಂ. ಪದ್ಮ, ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ಮಾಡಿ ಸತ್ಯಾಸತ್ಯಗಳನ್ನು ತಿಳಿದುಕೊಳ್ಳಲು ಮುಂದಾಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಶೌಚಾಲಯದ ಗುಂಡಿಗೆ ಇಳಿಸಿ ಮಲವನ್ನು ಕಾರ್ಮಿಕರಿಂದ ಹೊರಿಸಿರುವಂತಹ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿಸಿ ವರದಿಯನ್ನು ರಾಜ್ಯ ಸಮಿತಿಗೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಮಿಕರು ಮಲ ಹೊರುವ ಪದ್ಧತಿಯನ್ನು ಸರ್ಕಾರ ನಿಷೇಧಿಸಿದೆ. ಈ ನಡುವೆ ಅನಿಷ್ಠ ಪದ್ಧತಿ ಮಲ ಹೊರುವ ಪದ್ಧತಿ ನಿರ್ಮೂಲನೆಯಾಗಿದೆ ಹಾಗೂ ಸಫಾಯಿ ಕರ್ಮಚಾರಿಗಳೇ ಇಲ್ಲ ಎಂದು ಸರ್ಕಾರ ಸಮರ್ಥನೆ ಮಾಡಿಕೊಳ್ಳುತ್ತಿದೆ. ಆದರೆ, ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಲ್ಲೇ ಇವೆ ಎಂದು ವಿಷಾದ ವ್ಯಕ್ತಪಡಿಸಿದರು. ಬಾಗೇಪಲ್ಲಿಯಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಶೌಚಾಲಯದ ಗುಂಡಿಗೆ ಕಾರ್ಮಿಕರನ್ನು ಇಳಿಸಿರುವ ಗುತ್ತಿಗೆದಾರರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಮಲ ಹೊರುವ ಪದ್ಧತಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರನ್ನು ಗುರುತಿಸಿ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ ಅವರು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಕ್ಕಿಂಗ್ ಯಂತ್ರದ ಮೂಲಕ ಸ್ವಚ್ಛತೆ
ಬಾಗೇಪಲ್ಲಿ: ವೈದ್ಯರೇ ನಿಂತು ಮಲ ಹೊರಿಸಿದರು ಎಂಬ ಶೀರ್ಷಿಕೆಯಡಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು ಹಾಗೂ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳು ಸಕ್ಕಿಂಗ್ ಯಂತ್ರದ ಮೂಲಕ ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದಾರೆ.
ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಮಲ ಗುಂಡಿಗೆ ಕಾರ್ಮಿಕರನ್ನು ಇಳಿಸಿ ಆ ಗುಂಡಿಯಲ್ಲಿರುವ ಮಲವನ್ನು ಕಾರ್ಮಿಕರಿಂದ ತೆಗೆಸಲಾಗುತ್ತಿತ್ತು.
ಈ ಬಗ್ಗೆ ಕನ್ನಡಪ್ರಭದಲ್ಲಿ ಗುರುವಾರ ಸುದ್ದಿ ಪ್ರಕಟವಾಗಿತ್ತು. ಸಕ್ಕಿಂಗ್ ಯಂತ್ರದಿಂದ ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಆರ್. ಶ್ರೀಕಾಮತ್, ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಮಲ ಮೂತ್ರ ಗುಂಡಿಯಿಂದ ಮಾನವ ಶಕ್ತಿಯನ್ನು ಬಳಸಿ ಮಲವನ್ನು ಹೊರಿಸಲಾಗಿದೆ ಎನ್ನುವುದರ ಬಗ್ಗೆ ಆರೋಗ್ಯ ಉಪ ನಿರೀಕ್ಷಕರು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಖುದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ತನಿಖೆ ಮಾಡುತ್ತಿದ್ದೇನೆ ಎಂದರು. ವಾಸ್ತವಾಗಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಶೌಚಾಲಯ ಮುಚ್ಚಳವನ್ನು ಹಿಂದಕ್ಕೆ ಸರಿಸಿರುವುದು ಕಂಡು ಬಂದಿದ್ದು ಒಟ್ಟಾರೆ ಪ್ರಕರಣದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ತಿಳಿಸಿದರು.