ಸುದ್ದಿ ಸಂಕ್ಷೇಪ
ಆಸ್ಪತ್ರೆ ಕಟ್ಟಡಕ್ಕೆ ತಾಪಂ ಅಧ್ಯಕ್ಷರ ಭೇಟಿ
ಮಾಲೂರು: ಪಟ್ಟಣದ ಸರ್ಕಾರಿ ಅಸ್ವತ್ರೆ ಅವರಣದಲ್ಲಿ 2.5 ಕೋಟಿ ರು.ಗಳಲ್ಲಿ ನಿರ್ಮಿಸುತ್ತಿರುವ 100 ಬೆಡ್ನ ನೂತನ ಆಸ್ವತ್ರೆ ಕಟ್ಟಡಕ್ಕೆ ಭೇಟಿ ನೀಡಿದ ತಾಪಂ ಅಧ್ಯಕ್ಷ ಪುಟಸ್ವಾಮಿ ಫೀಲ್ಟರ್ ಮರುಳು ಬಳಕೆಯಾಗುತ್ತಿರುವ ಬಗ್ಗೆ ನಿರ್ಮಾಣ ಸಂಸ್ಥೆಯ ಅಭಿಯಂತರರನ್ನು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ. ಕಳದೆ ಎರಡು ವರ್ಷದಿಂದ ನಡೆಯುತ್ತಿರುವ ಕಾಮಗಾರಿ ಅವಧಿ ಮುಗಿದಿದ್ದರೂ ಪೂರ್ಣಗೊಳಿಸದಿರುವುದನ್ನು ಗಮನಿಸಿದ ತಾಪಂ ಅಧ್ಯಕ್ಷ ಪೋನಿನ ಮೂಲಕ ಕೆಎಚ್ಎಸ್ಆರ್ಡಿಬಿ ಎಇಇ ರಾಮಚಂದ್ರಪ್ಪರಿಂದ ಕಟ್ಟಡದ ಬಗ್ಗೆ ಮಾಹಿತಿ ಪಡೆದರು. ನಂತರ ಮಾತನಾಡಿ, ಕಳೆದ ಸೆಪ್ಟಂಬರ್ನಲ್ಲಿ ಕಾಮಗಾರಿ ಕಾಲಾವಧಿ ಪೊರ್ಣಗೊಂಡಿದ್ದು, ಈ ಸಂಬಂಧ ಗುತ್ತಿಗೆದಾರ ಬಾಲಾಜಿ ಗ್ರೂಪ್ಸ್ಗೆ ನೋಟಿಸ್ ನೀಡಲಾಗಿದೆ ಎಂದು ರಾಮಚಂದ್ರದವರು ತಿಳಿಸಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ, ಕಿರಣ್, ಸಿಬ್ಬಂದಿ ರಾಮಯ್ಯ, ಸಹಾಯಕ ಆಡಳಿತಾಧಿಕಾರಿ ಚಂದ್ರಬಾಬು, ಗುತ್ತಿಗೆ ಸಂಸ್ಥೆಯ ಅಭಿಯಂತರ ರವಿ ಇದ್ದರು.
ನೀರಿನ ವ್ಯವಸ್ಥೆ ಕಲ್ಪಿಸಲು ಮನವಿ
ಶ್ರೀನಿವಾಸಪುರ: ನೂತನವಾಗಿ ನವೀಕರಣಗೊಂಡಿರುವ ರೇಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ನಲ್ಲಿಗಳನ್ನು ಅಳವಡಿಸಿದ್ದು, ಅದರಲ್ಲಿ ನೀರು ಬರದೆ ಪ್ರಯಾಣಿಕರಿಗೆ ತೊಂದರೆಯಾಗಿದೆ. ರೇಲ್ವೆ ನಿಲ್ದಾಣ ಪಟ್ಟಣದ ಹೊರಗೆ ಇದ್ದು, ಪ್ರಯಾಣಿಕರಿಗೆ ರೇಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಯನ್ನು ಕಲ್ಪಿಸಿಕೊಡಬೇಕೆಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.
ವಿದ್ಯುತ್ ಶಾಕ್; ಬಾಲಕ ಸಾವು
ಕೆಜಿಎಫ್: ವಿದ್ಯುತ್ ಶಾಕ್ನಿಂದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಮೆಲ್ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೋಯಿಸೊಣ್ಣೇನಹಳ್ಳಿಯ ರುಕ್ಮಣಿ ಎಂಬವರ ಮಗ ಗುರುಕಿರಣ್(5) ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದಾನೆ. ರುಕ್ಮಣಿ ಎಂಬವರು ಬಟ್ಟೆ ಇಸ್ತ್ರಿ ಮಾಡಲು ಗೋಡೆಗೆ ಅಳವಡಿಸಿದ್ದ ಸ್ವಿಚ್ ಬಾಕ್ಸ್ಗೆ ಮತ್ತೊಂದು ಜಂಕ್ಷನ್ ಬಾಕ್ಸ್ನ್ನು ಅಳವಡಿಸಿ ನೆಲದ ಮೇಲೆ ಇಟ್ಟಿದ್ದರು. ಸದರಿ ಸ್ವಿಚ್ ಬಾಕ್ಸ್ನ ವೈರ್ನ್ನು ಇಲಿಗಳು ಕಚ್ಚಿದ್ದರಿಂದ ವಿದ್ಯುತ್ ಸಂಪರ್ಕವಾಗುವ ತಂತಿ ಹೊರಗೆ ಕಾಣುತ್ತಿದ್ದು ಬಾಲಕ ಗುರುಕಿರಣ್ ಮನೆಯಲ್ಲಿ ಆಟವಾಡುತ್ತಾ ತಿಳಿಯದೆ ವೈರ್ನ್ನು ಹಿಡಿದಿದ್ದರಿಂದ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಮೆಲ್ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಿಶ್ರಮದಿಂದ ಅಭಿವೃದ್ಧಿ ಸಾಧಿಸಿ
ಕೋಲಾರ: ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಮಕ್ಕಳು ಹೆಚ್ಚಿನ ಶ್ರಮ ವಹಿಸಿ ಮುಂಚೂಣಿಗೆ ಬರಬೇಕಿದೆ ಎಂದು ದೇವರಾಯಸಮುದ್ರ ಕ್ಲಸ್ಟರ್ ಸಿಆರ್ಪಿ ಟಿ.ಎಂ. ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗ್ರಾಮ ವಿಕಾಸ ಸಂಸ್ಥೆ ಹೊನ್ನಶೆಟ್ಟಹಳ್ಳಿ ಸಹಯೋಗದೊಂದಿಗೆ ಯಳಗೊಂಡಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಉದ್ಘಾಟಿಸಿ ಮಾತನಾಡಿ, ಸರ್ಕಾರದ ವಿನೂತನ ಕಾರ್ಯಕ್ರಮದಿಂದ ಮಕ್ಕಳ ಪಠ್ಯ ಜ್ಞಾನ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ತಿಳಿಸಿದರು.
21 ಶಾಲೆಗಳ 300 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಸಂಪನ್ಮೂಲ ವ್ಯಕ್ತಿಗಳಾದ ಬಿ.ಎಂ. ಶಂಕರಪ್ಪ, ಜಿ.ಎನ್. ರಾಜಕುಮಾರ್, ಪಿ.ವಿ. ಶ್ರೀರಾಮಯ್ಯ, ಶಿಕ್ಷಕರಾದ ವೆಂಕಟರಾಮ್, ಎಸ್. ನಾಗವೇಣಿ, ಶ್ರೀದೇವಿ, ರವೀಂದ್ರಬಾಬು ಕಾರ್ಯ ನಿರ್ವಹಿಸಿದರು. ಅಶ್ವಥ್, ಮುಖ್ಯ ಶಿಕ್ಷಕಿ ಸಿ. ಭಾರತಿ, ಸಹ ಶಿಕ್ಷಕರಾದ ಎನ್. ಗುರುರಾಜ್, ಕೆ.ಎಂ. ಗಾಯತ್ರಿ, ಆರ್. ರಾಜೇಶ್ವರಿ, ಭಾರತಿ, ವಿಜಯಕುಮಾರ್ ಇದ್ದರು. ಗ್ರಾಮ ವಿಕಾಸ ಸಂಸ್ಥೆ ವತಿಯಿಂದ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪ್ರತಿಭಾವಂತ ಕಲಾವಿದರಿಗೆ ಪುರಸ್ಕಾರ
ಚಿಂತಾಮಣಿ: ತಾಲೂಕಿನ ಮುರುಗಮಲ್ಲ ಹೋಬಳಿ ಯರಕೋಟೆ ಗ್ರಾಮದ ಶ್ರೀ ಗಂಗಮ್ಮ ದೇವಾಲಯದಲ್ಲಿ 2014ನೇ ನೂತನ ವರ್ಷದ ಅಂಗವಾಗಿ ವಿವಿಧ ಕಲಾ ಸಂಘಗಳ ಪ್ರತಿಭಾವಂತ ಕಲಾವಿದರಿಗೆ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ.
ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ವೈ.ಜಿ. ರಾಮಕೃಷ್ಣಪ್ಪ, ಚಲಮಕೋಟೆ ನರಸಿಂಹಪ್ಪ ಹಾಗೂ ವೆಂಕಟಶಾಮಿ ಸಂಗಡಿಗರದಿಂದ ಸುಗಮ ಸಂಗೀತ. ಮಧ್ಯಾಹ್ನ 2 ಗಂಟೆಯಿಂದ ಎ.ಎಲ್. ವೆಂಕಟೇಶ್ ಮತ್ತು ತಂಡದವರಿಂದ ಕೈವಾರ ಸದ್ಗುರು ತಾತಯ್ಯನವರ ಬುರ್ರಕಥೆ ಕಾರ್ಯಕ್ರಮ, ಸಾಯಂಕಾಲ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕೈವಾರ ತಾತಯ್ಯನವರ ಹಾಡುಗಳ ಕೋಲಾಟ ಕಾರ್ಯಕ್ರಮ, ಗುಟ್ಟೂರು ಲಕ್ಷ್ಮನರಸಿಂಹಸ್ವಾಮಿ ಕಲಾ ಮಂಡಳಿಯವರಿಂದ ಹಾರ್ಮೋನಿಯಂ ಮತ್ತಿತರೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಮಕ್ಕಳ ಟಿಸಿ ಪಡೆಯಲು ನಿರ್ಧಾರ
ಮುಳಬಾಗಲು: ತಾಲೂಕಿನ ಮೂಡಿಯನೂರು ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಜಮೀನು ವಿವಾದ ಭುಗಿಲೆದ್ದಿದೆ.
ಶಾಲೆಯ 18 ಎಕರೆ 5 ಗುಂಟೆ ಜಮೀನಿನ ಪೈಕಿ 14 ಎಕರೆ 25 ಗುಂಟೆ ಜಮೀನನ್ನು ಗ್ರಾಮದ ಕೆಲವರು ಅತಿಕ್ರಮಿಸಿಕೊಂಡು ಸಾಗುವಳಿ ಮಾಡುತ್ತಿದ್ದು, ಸದರೀ ಜಮೀನನ್ನು ಶಾಲೆಗೆ ಕೊಡಿಸಲು ಗ್ರಾಮಸ್ಥರು ಮಾಡಿದ ಮನವಿಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ಸ್ಪಂಧಿಸಿಲ್ಲವೆಂಬುದು ಗ್ರಾಮಸ್ಥರ ಆರೋಪವಾಗಿದೆ. ಶಾಲೆಯ ವ್ಯಾಪ್ತಿಗೆ ಮೂಡಿಯನೂರು ಸೇರಿದಂತೆ, ಗಡ್ಡೂರು, ಬೇಸ್ತರಹಳ್ಳಿ, ಕೂತಾಂಡಹಳ್ಳಿ, ಬಲ್ಲಶೆಟ್ಟಿಹಳ್ಳಿ, ದೊಡ್ಡಗುರ್ಕಿ ಗ್ರಾಮಗಳ ನೂರಕ್ಕೂ ಹೆಚ್ಚಿನ ಮಕ್ಕಳು ಶಾಲೆಗೆ ಬರುತ್ತಿದ್ದು, ಮೂಡಿಯನೂರ ಗ್ರಾಮಸ್ಥರ ಕರೆಯ ಮೇರೆಗೆ ಅವರಿಗೆ ಬೆಂಬಲವಾಗಿ ತಾವು ತಮ್ಮ ಮಕ್ಕಳ ಟಿಸಿ ಪಡೆದು ಬೇರೆ ಕಡೆ ವ್ಯಾಸಂಗ ಮಾಡಿಸುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಗುರುವಾರ ಗ್ರಾಮಸ್ಥರು ಸಭೆ ಸೇರಿದ್ದು ಮತ್ತೆ ಶುಕ್ರವಾರ ಸಂಜೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು ಎಂದು ಗ್ರಾಮಸ್ಥರು ಕನ್ನಡ ಪ್ರಭಕ್ಕೆ ತಿಳಿಸಿದ್ದಾರೆ.