ಅಕ್ಕಿ ಅಕ್ರಮ ದಾಸ್ತಾನು: ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹ
ಕೋಲಾರ: ಬಂಗಾರಪೇಟೆಯಲ್ಲಿನ ಭಾರತ್ ಟ್ರೇಡಿಂಗ್ ಗೋದಾಮಿನಲ್ಲಿ ಪಡಿತರ ಚೀಟಿಗಳಿಗೆ ವಿತರಿಸಬೇಕಾಗಿದ್ದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದನ್ನು ಪತ್ತೆಹಚ್ಚಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ರೈತ ಮುಖಂಡರ ವಿರುದ್ಧ ಸುಳ್ಳು ಆರೋಪ ಮಾಡಿ ರೈತ ಸಂಘದ ಹೆಸರಿಗೆ ಕೆಟ್ಟ ಹೆಸರು ತರಲು ಕೆಲ ರಾಜಕೀಯ ಮುಖಂಡರು ಹುನ್ನಾರ ನಡೆಸಿದ್ದಾರೆಂದು ಆರೋಪಿಸಿ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳು ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತುನು ಮಾಡಿದ ಮಾಲೀಕರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಬಂಗಾರಪೇಟೆ ಕ್ಷೇತ್ರದ ಶಾಸಕರ ಹಿಂಬಾಲಕರು ರೈತ ಸಂಘದ ಮುಖಂಡರ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿ ಪ್ರಾಣ ಬೆದರಿಕೆ ಹಾಕುತ್ತಿರುತ್ತಾರೆಂದು ದೂರಿದರು.
ಪಡಿತರ ಚೀಟಿಗಳಿಗೆ ವಿತರಿಸುತ್ತಿರುವ ಅಕ್ಕಿಯನ್ನು ಕೊಳ್ಳಬಾರದೆಂದು ವರ್ತಕರಿಗೆ ಸೂಚಿಸಿದ್ದ ತಮಿಳುನಾಡು ಪೊಲೀಸ್ ಅಧಿಕಾರಿ ಸ್ವಾಮಿನಾಥನ್ ಮೇಲೂ ವರ್ತಕರು ತಿರುಗಿಬಿದ್ದಿರು. ಶಾಸಕರ ಬೆಂಬಲಿಗರು ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಮೂಲಕ ರೈತ ಮುಖಂಡರನ್ನು ಕಳ್ಳರನ್ನಾಗಿ ಬಿಂಬಿಸುತ್ತಿದ್ದಾರೆಂದು ದೂರಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಕೆ.ರವಿ ರವರು ಈಗಾಗಲೇ ಬಂಗಾರಪೇಟೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಕ್ಕಿ ಗೋದಾಮಿಗೆ ಬೀಗ ಹಾಕಿರುವುದು ಗಮನಕ್ಕೆ ಬಂದಿದ್ದು, ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಿಸನಹಳ್ಳಿ ಬೈಚೇಗೌಡ, ಜಿ. ನಾರಾಯಣಸ್ವಾಮಿ, ತಿರುಮಲಹಟ್ಟಿ ದೇವರಾಜ್, ಚಂದ್ರಶೇಖರ್, ಕೋಡೂರು ಗೋಪಾಲ್, ಮಾಗೇರಿ ಸೀನಪ್ಪ, ಲಕ್ಷ್ಮಣ ಹಾಗೂ ವಿವಿಧ ತಾಲೂಕು ಪದಾಧಿಕಾರಿಗಳು ಇದ್ದರು.