ಮಕ್ಕಳಾಗಿರುವಾಗಲೇ ಕ್ರೀಡಾ ಮನೋಭಾವ ಬೆಳೆಸಿ: ಬಾಲಾಜಿಸಿಂಗ್
ಚಿಕ್ಕಬಳ್ಳಾಪುರ: ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಕ್ರೀಡೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಬೇಕೆಂದು ವೃತ್ತ ನಿರೀಕ್ಷಕ ಎಂ.ಎಸ್. ಬಾಲಾಜಿಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಹೊರ ವಲಯದ ಸಿವಿವಿ ಕ್ರೀಡಾಂಗಣದಲ್ಲಿ ಶ್ರೀ ಕೆ.ವಿ.ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಶಾಲಾಂತರಗತ ಗುಡ್ಡಗಾಡು ಓಟದ ಪಂದ್ಯಾವಳಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಒತ್ತಡ, ಮಾನಸಿಕ ತುಮುಲಗಳನ್ನು ದೂರವಾಗಿಸುತ್ತದೆ. ಇದರಿಂದ ಕ್ರೀಡೆಯಲ್ಲಿ ಗೆಲ್ಲುವ ಛಲದಿಂದ ಭಾಗವಹಿಸುವುದೇ ಹೊರತು ಸೋಲು ಗೆಲುವೇ ಮುಖ್ಯವಲ್ಲ ಎನ್ನುವುದನ್ನು ಕ್ರೀಡಾಪಟುಗಳು ಅರ್ಥ ಮಾಡಿಕೊಂಡು ನಿರಂತರ ಅಭ್ಯಾಸದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ಸನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಅನೇಕ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಕೀರ್ತಿ ತರುತ್ತಿದ್ದು, ಇಂತಹ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು. ಪಿ. ಮುನಿಸ್ವಾಮಿ ಮಾತನಾಡಿದರು. ಉಪ ಪ್ರಾಂಶುಪಾಲ ಅಶ್ವತ್ಥಪ್ಪ, ಡಾ.ಅಮರೇಂದ್ರ, ಮಂಜುನಾಥ್, ನಾರಾಯಣಸ್ವಾಮಿ, ಗಣೇಶ್, ಮಂಜು ನಾಥ್, ಪ್ರವೀಣ್‌ಕುಮಾರ್, ಶ್ರೀನಿವಾಸ್ ಇದ್ದರು.