ಅತ್ತಿಗಿರಿಕೊಪ್ಪದ ಕೆರೆಯಲ್ಲಿ 20 ಕೊಳವೆಬಾವಿ
ಬಂಗಾರಪೇಟೆ: ಪಟ್ಟಣದಲ್ಲಿ ತಲೆದೋರಿರುವ ಕುಡಿಯುವ ನೀರಿನ ಬವಣೆ ನೀಗಿಸಲು ಮುಂದಿನ ವಾರ ಪಟ್ಟಣಕ್ಕೆ ಅಂಟಿಕೊಂಡಿರುವ ಅತ್ತಿಗಿರಿಕೊಪ್ಪದ ಕೆರೆಯಲ್ಲಿ 20 ಕೊಳವೆಬಾವಿಗಳನ್ನು ಕೊರೆಸಿ ನೀರಿನ ಸಮಸ್ಯೆ ನೀಗಿಸುವುದಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಬರಗಾಲದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು ಅದನ್ನು ನಿಯಂತ್ರಿಸಲು ಕ್ರಮವಹಿಸಲಾಗಿದ್ದರೂ ನೀಗುತ್ತಿಲ್ಲ ಈಗಲೇ ಪರಿಸ್ಥಿತಿ ಹೀಗಾದರೆ ಬೇಸಿಗೆಯಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದ್ದು ಈ ಹಿನ್ನೆಲೆಯಲ್ಲಿ 2ಕೋಟಿ ವೆಚ್ಚದಲ್ಲಿ ಅತ್ತಿಗಿರಿಕೊಪ್ಪದಲ್ಲಿ 20 ಕೊಳವೆಬಾವಿಗಳನ್ನು ಕೊರೆಸಿ ಅಲ್ಲಿ ಸಿಗುವ ನೀರನ್ನು ಕೆರೆ ಅಂಗಳದಲ್ಲೇ ಬೃಹತ್ ಸಂಪ್ ನಿರ್ಮಾಣ ಮಾಡಿ ಅದರಲ್ಲಿ ತುಂಬಿ ನಂತರ ನಾಗರೀಕರಿಗೆ ವಾರಕ್ಕೊಮ್ಮೆ ಕುಡಿಯುವ ನೀರನ್ನು ಪೂರೈಸಲು ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು ಅವರೂ ಒಪ್ಪಿದ್ದು ಮುಂದಿನ ವಾರ ಬೊರೆ ಕೊರೆಸುವ ಸ್ಥಳವನ್ನು ಬೆಸ್ಕಾಂ ಮತ್ತು ನಗರ ನೀರು ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಹಾಗೂ ಬರಪೀಡಿತ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಿದೆ ಅದರಂತೆ ಕ್ಷೇತ್ರ ಸಹ ಬರಪೀಡಿತ ವ್ಯಾಪ್ತಿಗೆ ಒಳಪಟ್ಟಿದ್ದು ಹೆಚ್ಚಿನ ಅನುದಾನ ನೀಡಿ ಕ್ಷೇತ್ರದ ಕೂಲಿ ಕಾರ್ಮಿಕರು ವಲಸೆ ಹೋಗದಂತೆ ತಡೆಯಲು ಬರ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಪಂಚಾಯ್ತಿಗಳಲ್ಲಿ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಪಿಡಿಒಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿ ಬರವನ್ನು ಸಮರ್ಪಕವಾಗಿ ಎದುರಿಸಲು ಸರ್ಕಾರ ಸರ್ವ ರೀತಿಯಲ್ಲಿಯೂ ಸಿದ್ಧವಾಗಿದೆ, ವಿರೋಧ ಪಕ್ಷಗಳು ವಿನಾಕಾರಣ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಅದನ್ನು ಜನರು ನಂಬಬಾರದು ಎಂದು ಹೇಳಿದರು.
ನಗರ ನೀರು ಸರಬರಾಜು ಇಲಾಖೆ ಎಇಇ ರಘುನಾಥಶೆಟ್ಟಿ, ಪುರಸಭೆ ಸದಸ್ಯರಾದ ಕೆ. ಚಂದ್ರಾರೆಡ್ಡಿ, ಶಫಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಬೆಸ್ಕಾಂ ಸಹಾಯಕ ಎಂಜಿನಿಯರ್ ಹುಸೇನಿ ಮತ್ತಿತರರು ಇದ್ದರು.