ಗ್ರಾಮೀಣ ಜನತೆಗೆ ಹಕ್ಕು, ಜವಾಬ್ದಾರಿಗಳ ಅರಿವು ಇರಲಿ: ನ್ಯಾ. ಸಿ.ಜಿ. ಹುನಗುಂದ್
ಗುಡಿಬಂಡೆ: ಪಟ್ಟಣದ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಮತ್ತು ಬೆಂಗಳೂರು ವಿಜಯನಗರದ ಲಯನ್ಸ್ ಕ್ಲಬ್ ಸಹಯೋಗದಲ್ಲಿ ತಾಲೂಕಿನ ತಿರುಮಣಿ ಗ್ರಾಮದಲ್ಲಿ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಏರ್ಪಡಿಸಲಾಗಿತ್ತು.
ಆಯೋಗದ ಸದಸ್ಯ ನ್ಯಾ. ಸಿ.ಜಿ ಹುನಗುಂದ್ ಉನ್ನತಿ ಸಂಸ್ಥೆಯಿಂದ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಸಮಾವೇಶ, ಮಾನವ ಹಕ್ಕುಗಳ ಉಲ್ಲಂಘನೆ ಘೋರ ಅಪರಾಧ ವಿಚಾರದಲ್ಲಿ ಆಯೋಗಕ್ಕೆ ತಪ್ಪಿತಸ್ಥರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ಶಿಕ್ಷೆಗೆ ಗುರಿಪಡಿಸುವ ಅಧಿಕಾರವಿದೆ. ಗ್ರಾಮೀಣ ಭಾಗದ ಜನತೆ ತಮ್ಮ ಹಕ್ಕು ಹಾಗೂ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿಕೊಂಡು ಇತರರನ್ನು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಅಂಗವಿಕಲರು, ಹಿರಿಯ ನಾಗರಿಕರು ಮತ್ತು ಮಕ್ಕಳ ಪ್ರಗತಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ನೆರವು ನೀಡಬೇಕು. ಪ್ರಜೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಅಧಿಕಾರಿಗಳಿಗೆ ಉಗ್ರ ಶಿಕ್ಷೆ ಕಾದಿದೆ ಎಂದು ಅವರು ಎಚ್ಚರಿಕೆ ನೀಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಜಿ. ಸುಧಾಕರ್ ಮಕ್ಕಳ ಹಕ್ಕುಗಳು ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದರು.
ತಾಲೂಕು ಆಸ್ಪತ್ರೆಗೆ ಭೇಟಿ: ಈ ವೇಳೆ ನ್ಯಾ. ಸಿ.ಜಿ. ಹುನಗುಂದ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ದಂದಿ ಕಾರ್ಯವೈಖರಿ, ಔಷಧಿ ದಾಸ್ತಾನು ಮತ್ತು ರೋಗಿಗಳ ಕೊಠಡಿಗಳನ್ನು ಪರೀಕ್ಷಿಸಿ ಉತ್ತಮ ಸೇವೆಯನ್ನು ನೀಡಲು ಅಲ್ಲಿನ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ನಂತರ ಪಟ್ಟಣದ ಪ್ರವಾಸಿ ಮಂದಿರಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಅಧಿಕಾರಿಗಳ ಜೋತೆ ಸಭೆ: ಕಾರ್ಯಕ್ರಮದ ಕೊನೆಯ ಭಾಗದಲ್ಲಿ ತಾಲೂಕು ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನ್ಯಾ.ಹುನಗುಂದ್ ಭಾಗದ ಈ ಪ್ರದೇಶ ಮೂಲ ಭೂತ ಸೌಕರ್ಯಗಳಿಂದ ವಂಚಿತವಾಗಿರುವುದು ನನ್ನ ಗಮನಕ್ಕೆ ಬಂದಿದೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿ ತನದಿಂದ ಸಮಸ್ಯೆಗಳು ಪರಿಹಾರವಾಗಿಲ್ಲ.ಇಲಾಖಾ ಮೇಲಧಿಕಾರಿಗಳು ನಿಯಮಿತವಾಗಿ ತಾಲೂಕಿನಲ್ಲಿ ಕುಂದುಕೊರತೆ ಸಭೆಗಳನ್ನು ನಡೆಸಿ ಜನತೆಯ ದೂರು ದುಮ್ಮಾನಗಳನ್ನು ಪರಿಹರಿಸಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ವಕೀಲ ಉನ್ನತಿ ವಿಶ್ವನಾಥ್, ಲಯನ್ ಆರುಣಣ್ಪ್ರಕಾಶ್, ಲಯನ್ ರಾಮಮೂರ್ತಿ, ಲೋಕಾಯುಕ್ತ ಎಸ್ಪಿ ಕೃಷ್ಣಪ್ಪ ಹಾಗೂ ತಾಲೂಕಿನ ಹಲವು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಹಾಜರಿದ್ದರು.