'ಧ್ಯಾನ, ಯೋಗದಿಂದ ಆರೋಗ್ಯ'
ಚಿಂತಾಮಣಿ: ಧ್ಯಾನ ಮತ್ತು ಜ್ಞಾನದಿಂದ ಮಾನವ ಸಮಾಜದಲ್ಲಿ ಸತ್‌ಪ್ರಜೆ ಆಗಲು ಸಾಧ್ಯವೆಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರು ಹೇಳಿದರು.
ತಾಲೂಕಿನ ಯರಕೋಟೆ ಗ್ರಾಮದಲ್ಲಿ ಶ್ರೀ ಗಂಗಾಭವಾನಿ ಸೇವಾ ಟ್ರಸ್ಟ್ ಹಾಗೂ ಗಂಗಾಭವಾನಿ ಕಲಾಸಂಘ ಮತ್ತು ಹರಿನಾಮ ಸೇವಾ ಸಮಿತಿ ವತಿಯಿಂದ 2014ನೇ ಸಾಲಿನ ನೂತನ ವರ್ಷದ ಪ್ರಯುಕ್ತ ಶ್ರೀ ಗಂಗಮ್ಮ ದೇವಿಗೆ ವಿಶೇಷ ಪೂಜೆ ಹಾಗೂ ಪ್ರತಿಭಾವಂತ ಕಲಾವಿದರಿಗೆ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಸಂಸ್ಕೃತಿ ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತವೆ. ಯರಕೋಟೆಯಲ್ಲಿ ಕಲಾಭವನ ನಿರ್ಮಾಣ ಮಾಡಲು ಕೇಂದ್ರ ಸಣ್ಣ ಹಾಗೂ ಮಧ್ಯಮ ಇಲಾಖೆ ಅನುದಾನದಲ್ಲಿ 5 ಲಕ್ಷ ವೆಚ್ಚದ ಕಟ್ಟಡ ನಿರ್ಮಿಸಲು ಕೆ.ಎಚ್.ಮುನಿಯಪ್ಪ ಸಭೆಯಲ್ಲಿ ಭರವಸೆ ನೀಡಿದರು. ಜನವರಿ 14 ರ ಒಳಗೆ ಸಂಬಂಧಪಟ್ಟ ಅಧಿಕಾರಿ ಹಾಗೂ ಅಭಿಯಂತರರ ಜೊತೆ ಮಾತನಾಡಿ, ನಕ್ಷೆ ತಯಾರಿಸಿ ಕಲಾವಿದರಿಗೆ ಹಾಗೂ ಕಲಾಭಿಮಾನಿಗಳಿಗೆ ಉತ್ತಮ ಕಲಾಭವನ ನಿರ್ಮಿಸಲು ತಮ್ಮ ಕೈಲಾದ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ವಾಣಿ ಕೃಷ್ಣಾರೆಡ್ಡಿ ಮಾತನಾಡಿದರು. ಸಿ.ಎನ್.ನರಸಿಂಹರೆಡ್ಡಿ, ಕೆಪಿಸಿಸಿ ಸದಸ್ಯ ಗೋವಿಂದಸ್ವಾಮಿ, ತಾಪಂ ಸದಸ್ಯರಾದ ಹಾದಿಗೆರೆ ಚೌಡರೆಡ್ಡಿ, ರೆಡ್ಡೆಮ್ಮ ಶ್ರೀರಾಮ್, ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ ಮುರಳಿ ಭಾಗವಹಿಸಿದ್ದರು.