ಸುದ್ದಿ ಸಂಕ್ಷೇಪ
'ರಾಜಕೀಯ ಒತ್ತಡದ ನಡುವೆ ಪ್ರಾಮಾಣಿಕ ಕರ್ತವ್ಯ ನಿರ್ವವಣೆ ನೌಕರರಿಗೆ ಅನಿವಾರ್ಯ'
ಮಾಲೂರು: ಸಾರ್ವಜನಿಕರ ಸೇವೆಯಲ್ಲಿರುವ ಸರ್ಕಾರಿ ನೌಕರರು ರಾಜಕೀಯ ಒತ್ತಡದ ನಡುವೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣಿ ಹೇಳಿದರು. ಅವರು ಇಲ್ಲಿನ ಶಕ್ತಿಸೌಧದಲ್ಲಿ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರೂ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಿ ಅವರ ಅಹವಾಲುಗಳಿಗೆ ನಿಯಮಾನುಸಾರ ಉತ್ತರ ದೊರಕಿಸಿಕೊಡುವ ಪ್ರಯತ್ನ ಮಾಡಿ ಎಂದರು. ಸರ್ಕಾರಿ ನೌಕರರಿಗೆ ನಡವಳಿಕೆ ಅವರ ಇಲಾಖೆಗೆ ಒಳ್ಳೆ ಹೆಸರು ಕಾರಣವಾಗುತ್ತದೆ ಎಂದ ಬಿಇಓ ದಿನಚರಿಯಂತೆ ನಿಗದಿತ ವೇಳಾನುಸಾರ ಕಾರ್ಯನಿರ್ವಹಿಸಿ ಸಾರ್ವಜನಿಕರ ಪ್ರೀತಿಗಳಿಸಿ ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುಂಡಪ್ಪ ಮಾತನಾಡಿ ತಾಲೂಕಿನಲ್ಲಿ ನೌಕರರ ಸಂಘ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ನೌಕರರಿಗೆ ಅಲ್ಲದೆ ಸಾರ್ವಜನಿಕರ ಪರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದಾಗಿ ತಿಳಿಸಿದ ಗುಂಡಪ್ಪ ರವರು ಇಲಾಖೆಗಳಲ್ಲಿ ನಿರ್ಭೀತಿಯಿಂದ ಕಲಸ ಮಾಡುವಂತೆ ಶಾಸಕರೇ ತಿಳಿಸಿದ್ದು,ಒಂದು ವೇಳೆ ನೌಕರರ ಕರ್ತವ್ಯಕ್ಕೆ ಅಡ್ಡಿಯಾಗುತ್ತಿರುವ ಪರಿಸ್ಥಿತಿ ಉದ್ಭವವಾದರೆ ರಸ್ತೆಗಿಳಿದ್ದು ಹೋರಾಟ ಮಾಡಲು ಸಂಘ ಸಿದ್ದವಿದೆ ಎಂದರು. ರಾಜ್ಯ ಪರಿಷತ್ನ ಅಧ್ಯಕ್ಷ ಜೈರಾಮ್, ಪ್ರಾ.ಶಿ.ಸಂ. ಅಧ್ಯಕ್ಷ ಮುನಿನಾರಾಯಣ್, ಪ್ರೌ.ಶಿ.ಸಂ. ಅಧ್ಯಕ್ಷ ಕೆಂಪಣ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂತನ ವರ್ಷದ ಕ್ಯಾಲೆಂಡರ್ನ್ನು ಬಿಡುಗಡೆ ಮಾಡಲಾಯಿತು. ಗಂಗರಾಮ್, ವಿಜಯಲಕ್ಷ್ಮಿ, ವೀರಣ್ಣ, ಬಹುದ್ದೂರ್, ವೆಂಕಟೇಶ್, ಮುನಿಶ್ಯಾಮಿ, ಪಿಳ್ಳಪ್ಪ ಇದ್ದರು. ವೆಂಕಟಸ್ವಾಮಿ ಸ್ವಾಗತಿಸಿದರು. ಸೋಮಶೇಖರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಎಸ್.ಎನ್.ಎಸ್. ಮುನಿರಾಜು ವಂದಿಸಿದರು.
ಕೃಷಿ ಅಧಿಕಾರಿ ಅಸಹಜ ಸಾವು
ಬಂಗಾರಪೇಟೆ: ಜಲಾನಯನ ಇಲಾಖೆಯಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಎಂ.ಸಿ. ಕೌಂಟಗಿರವರು ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಪಟ್ಟಣದ ವಿವೇಕಾನಂದನಗರದಲ್ಲಿ ವಾಸವಾಗಿರುವ ಕೌಂಟಗಿ, ಮನೆಯಲ್ಲಿ ಎಲ್ಲರೂ ತಮ್ಮ ಸ್ವಂತ ಊರಾದ ಬಿಜಾಪುರ ಜಿಲ್ಲೆಯ ದೇವಾಪುರಕ್ಕೆ ಹೋಗಿದ್ದರು. ಶನಿವಾರ ಕೌಂಟಗಿ ಮನೆಯಲ್ಲಿ ಶವವಾಗಿ ಬಿದ್ದಿದ್ದಾನೆ. ಅಕ್ಕಪಕ್ಕದವರು ಗಮನಿಸಿ ಬಿಜಾಪುರದಲ್ಲಿದ್ದ ಅವರ ಪಕ್ನಿ ರುಕ್ಮಣಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಪರಿಶೀಲಿಸಿದಾಗ ಯಾವುದೇ ಸಾವಿಗೆ ಸುಳಿವು ದೊರೆಯಲಿಲ್ಲ, ಕೌಂಟಗಿ ಸಾವಿನ ಸುತ್ತ ಈಗ ಅನುಮಾನದ ಹುತ್ತ ಬೆಳೆದಿದೆ. ಮರಣೋತ್ತರ ಪರೀಕ್ಷೆಯಿಂದ ಸತ್ಯಾಂಶ ಹೊರಬರಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಾಲಿ ಕ್ರೇಟ್ಗಳ ವಶ
ಚಿಂತಾಮಣಿ: ಎಪಿಎಂಸಿ ಯಾರ್ಡ್ನಲ್ಲಿ ಟಮೋಟ ಬಾಕ್ಸ್ಗಳನ್ನು ದಾಸ್ತಾನು ಮಾಡಿದ್ದ ಮಳಿಗೆಯ ಬೀಗ ಹೊಡೆದು ಬೆಲೆಬಾಳುವ ಖಾಲಿ ಕ್ರೇಟ್ಗಳನ್ನು ಟೆಂಪೋದಲ್ಲಿ ಸಾಗಿಸಲು ಯತ್ನಿಸಿದ ಮಾಲು ಸಮೇತ ಬಂಧಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ನಗರದ ಎಪಿಎಂಸಿ ಯಾರ್ಡ್ನ ಉಗ್ರಾಣವೊಂದರಲ್ಲಿ ಅನಿಲ್ಕುಮಾರ್ ಮತ್ತು ಜೈಸಿಂಗ್ ಎಂಬುವವರಿಗೆ ಸೇರಿದ ಟಮೋಟ ಖಾಲಿ ಕ್ರೇಟ್ ಬಾಕ್ಸ್ಗಳನ್ನು ಸುಮಾರು 623 ಖಾಲಿ ಬಾಕ್ಸ್ಗಳನ್ನು ಚೌಡರೆಡ್ಡಿ ಪಾಳ್ಯದ ನಿವಾಸಿಯಾದ ಚಾಲಕ ಚಾಂದ್ ಪಾಷ ಮತ್ತು ವೆಂಕಟಗಿರಿಕೋಟೆಯ ಮುಕ್ರಂಪಾಷ ಕಳ್ಳತನ ಮಾಡಿದ್ದಾರೆ. ಒಂದು ಲೋಡನ್ನು ತುಮಕೂರಿನಲ್ಲಿ ಮಾರಾಟ ಮಾಡಲಾಗಿದ್ದು, ಮತ್ತೊಂದು ಲೋಡ್ ಮಾಡುವಾಗ ಭಾನುವಾರ ರಾತ್ರಿ ಸುಮಾರು 8.30 ಸುಮಾರಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರಠಾಣೆಯ ಸಬ್ ಇನ್ಸ್ಪೆಕ್ಟರ್ ಮುರಳಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಟೆಂಪೋಗೆ ಕಾರು ಡಿಕ್ಕಿ: ನಾಲ್ವರಿಗೆ ಗಾಯ
ಚಿಂತಾಮಣಿ: ರಸ್ತೆ ಬದಿಯಲ್ಲಿ ನಿಂತಿದ್ದ ಮಿನಿ ಟೆಂಪೋಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ಕೆಂಚಾರ್ಲಹಳ್ಳಿ ಠಾಣಾ ವ್ಯಾಪ್ತಿಯ ದಂಡುಪಾಳ್ಯ ಕ್ರಾಸ್ ಬಳಿ ಭಾನುವಾರ ಸಂಜೆ ನಡೆದಿದೆ. ಟಾಟಾ ಎ.ಸಿ ಮಿನಿ ಟೆಂಪೋ ಪ್ರಯಾಣಿಕರನ್ನು ದಂಡುಪಾಳ್ಯ ಗ್ರಾಮದ ಗೇಟ್ ಬಳಿ ಇಳಿಸುತ್ತಿರುವಾಗ ಮದನಪಲ್ಲಿ ಕಡೆಯಿಂದ ಬಂದ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಸಲಾಗಿದೆ. ಅದರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಶ್ರೀನಿವಾಸ ಎಂಬಾತನ ಕಾಲು ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗೆ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಸಲಾಗಿದೆ. ಕೆಂಚಾರ್ಲಹಳ್ಳಿ ಠಾಣೆ ಸಬ್ ಇನ್ಸ್ಪೆಕ್ಟರ್ ರಾಜಣ್ಣ ಪ್ರಕರಣ ದಾಖಲಿಸಿಕೊಂಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಲೂರಲ್ಲಿ ಶಾಂತಿಯುತ ಮತದಾನ
ಮಾಲೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಮಾಲೂರು ಪಟ್ಟಣದ ಬಿಜಿಎಸ್ ಸಂಸ್ಥೆಯ ಶಾಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಿಂದ ರಾಜ್ಯ ಸಂಘದಲ್ಲಿ ಪ್ರತಿನಿಧಿಸುವ 3 ನಿದೇರ್ಶಕರನ್ನು ಆಯ್ಕೆ ಮಾಡುವ ಸಲುವಾಗಿ ನಡೆದ ಇಂದಿನ ಚುನಾವಣೆಯಲ್ಲಿ 3 ಸ್ಥಾನಕ್ಕಾಗಿ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಬ್ಬ ಮತದಾರರಿಗೆ 3 ಅಭ್ಯರ್ಥಿಗಳಿಗೆ ಮತ ಹಾಕುವ ಹಕ್ಕು ಪಡೆದಿದ್ದು, ಬೆಳಿಗ್ಗಿನಿಂದಲ್ಲೇ ಹುರುಪಿನಿಂದಲ್ಲೇ ಮತದಾರರು ಮತಕೇಂದ್ರವಾಗಿದ್ದ ಬಿಜಿಎಸ್ ವಿದ್ಯಾಕೇಂದ್ರದಲ್ಲಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ತಾಲೂಕಿನಲ್ಲಿರುವ 1644 ಮತದಾರರಲ್ಲಿ 1484 ಮತದಾರರು ಮತಚಲಾಯಿಸಿ ಶೇ.90.25 ರಷ್ಟು ಮತದಾನ ನಡೆದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸಿ.ವಿ. ನಾಗರಾಜ್ ಗೌಡ ತಿಳಿಸಿದ್ದಾರೆ.
ಮಡಿವಾಳರ ಸಮಾವೇಶಕ್ಕೆ ಮಾಲೂರಿಂದ 8 ಬಸ್ಸಲ್ಲಿ ಜನ
ಮಾಲೂರು: ಬೆಂಗಳೂರಿನಲ್ಲಿ ಭಾನುವಾರ ನಡೆಯುತ್ತಿದ್ದ ಕರ್ನಾಟಕ ರಾಜ್ಯ ಮಡಿವಾಳರ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಪಟ್ಟಣದಿಂದ 8 ಬಸ್ಗಳಲ್ಲಿ ಹೊರಟಿದ್ದ ತಾಲೂಕು ಮಡಿವಾಳ ಜನಾಂಗದವರ ಪ್ರಯಾಣಕ್ಕೆ ಪುರಸಭೆ ಮುಖ್ಯಾಧಿಕಾರಿ ರೇಣುಕಾ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಇತರೆ 17 ರಾಜ್ಯಗಳು ಒಪ್ಪಿಕೊಂಡಿರುವಂತೆ ರಾಜ್ಯ ಸರ್ಕಾರವು ಸಹ ಮೈಸೂರು ವಿ.ವಿ. ಪ್ರೊ.ಅನ್ನಪೂರ್ಣ ರವರ ವರದಿ ಪುರಸ್ಕರಿಸಿ ಜನಾಂಗವು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರವಾಗುವಂತೆ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡಿಸಬೇಕು ಎಂದರು.
ಮಡಿವಾಳ ಜನಾಂಗದ ಅಭಿವೃದ್ಧಿಗಾಗಿ ಮಾಚಿದೇವರ ಜನ್ಮಸ್ಥಳವಾದ ದೇವರ ಹಿಪ್ಪರಿಗೆಯಲ್ಲಿ ಮಾಚಿದೇವ ಪ್ರಾಥಿಕಾರ ಹಾಗೂ ಅಧ್ಯಾಯನ ಪೀಠ ರಚಿಸುವ ಜತೆಯಲ್ಲಿ ಮಾಚಿ ದೇವರ ಜನ್ಮದಿನವನ್ನು ಮಾಚಿದೇವ ಜಯಂತಿ ಎಂದು ರಾಜ್ಯ ಸರ್ಕಾರವು ಘೋಷಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಶ್ರೀನಿವಾಸಲು, ಕಾರ್ಯದರ್ಶಿ ಸುಬ್ರಮಣಿ, ವೆಂಕಟೇಶ್, ಆಂಜಿ, ಪೊಲೀಸ್ ಕೃಷ್ಣಮೂರ್ತಿ, ಪುರಸಭೆ ಆರೋಗ್ಯಾಧಿಕಾರಿ ರಾಜಣ್ಣ, ಮುನಿರಾಜು, ವೇಣುಗೋಪಾಲ್, ರಮೇಶ್, ಮುನಿಕೃಷ್ಣ, ಟಿ. ರಮೇಶ್, ಲಕ್ಕೂರು ಹರೀಶ್, ದ್ವಾರಕೀಶ್, ಅರಳೇರಿ ವೇಣು, ನಾಗರಾಜಯ್ಯ, ಜನಾಂಗದ ಮುಖಂಡರು ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದರು.