ಗಂಗಾ ಕಲ್ಯಾಣ ಯೋಜನೆಗೆ ಚಾಲನೆ
ಕೆಜಿಎಫ್: ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದಲ್ಲಿ ಮಳೆ ಇಲ್ಲದೆ ಗ್ರಾಮೀಣ ಪ್ರದೇಶದ ರೈತರು ಮತ್ತು ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ಗಂಗಾ ಕಲ್ಯಾಣ ಯೋಜನೆಯಡಿ 1.5 ಕೋಟಿ ವೆಚ್ಚದಲ್ಲಿ ಕೊಳವೆಬಾವಿ ಕೊರೆಸಿರುವುದು ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕಿ ವೈ. ರಾಮಕ್ಕ ತಿಳಿಸಿದರು.
ಗಂಗಾಂಡ್ಲಹಳ್ಳಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ಯೋಜನೆಯಡಿ ಉಚಿತ ಕೊಳವೆಬಾವಿ ಕೊರೆಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಅದೇ ರೀತಿ ಕೆಜಿಎಫ್ ಕ್ಷೇತ್ರದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಬಡ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಹಲವು ಸಣ್ಣ ಮತ್ತು ಅತಿ ಸಣ್ಣ ರೈತರು ಸೂಕ್ತ ನೀರಾವರಿ ವ್ಯವಸ್ಥೆ ಮತ್ತು ಮಳೆ ಇಲ್ಲದ ಕಾರಣ ಕೃಷಿ ಚಟುವಟಿಕೆಗಳಿಗೆ ವ್ಯಾಪಕ ತೊಂದರೆಯಾಗಿದೆ. ನೆರವಾಗಲು 105 ಕೊಳವೆಬಾವಿ ಹಾಗೂ ಸಂಪ್‌ಸೆಟ್ ಅಳವಡಿಕೆ ಹೆಚ್ಚು ಉಪಯುಕ್ತವಾಗಲಿದೆ ಎಂದರು.
ಈ ವೇಳೆ ಮಾಜಿ ಶಾಸಕ ವೈ. ಸಂಪಂಗಿ, ಬಿಜೆಪಿ ಮುಖಂಡರಾದ ಮುನಿಸ್ವಾಮಿರೆಡ್ಡಿ, ಬಿಲ್ಲೇರಹಳ್ಳಿ ವೆಂಕಟರೆಡ್ಡಿ, ಸುಮಾನಾಗರಾಜ್, ಕಂಟಪ್ಪ, ಅಮರನಾರಾಯಣರೆಡ್ಡಿ, ಗಂಗಪ್ಪ, ರಾಮಚಂದ್ರರೆಡ್ಡಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಧಿಕಾರಿ ರಾಮಕೃಷ್ಣ, ಗುತ್ತಿಗೆದಾರ ಸವಜ್ಞಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.