ಜಿಲ್ಲೆಗೆ ಶಾಶ್ವತ ನೀರಾ'ವರಿ' ಮುಗಿವುದೇ?
ಕ.ಪ್ರ. ವಾರ್ತೆ ಕೋಲಾರ ಜ. 6
ಅತಿ ಹೆಚ್ಚು ಅಂತರ್ಜಲ ಬಳಕೆಯಿಂದ ನಾನಾ ರೀತಿಯ ಸಮಸ್ಯೆ ಎದುರಿಸುತ್ತಿರುವ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯಕ್ಕಾಗಿ ಕಳೆದ 15 ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ ಪರಿಹಾರ ಸಿಗದಂತಾಗಿದೆ.
ಎತ್ತಿನ ಹೊಳೆ, ಯರಗೋಳ್, ಸೇರಿದಂತೆ ಸರ್ಕಾರದ ಮುಂದಿನ ನೀರಾವರಿ ಯೋಜನೆಗಳ ಅನುಷ್ಠಾನಗೊಳ್ಳುವ ತನಕ ಲಭ್ಯವಿರುವ ಅಂತರ್ಜಲವನ್ನು ಶುದ್ಧೀಕರಿಸಿ ಕುಡಿಯಲು ಒದಗಿಸದಿದ್ದರೆ ರೋಗ ರುಜಿನ ಹೆಚ್ಚಾಗಿ ಜನರ ಪ್ರಾಣಕ್ಕೆ ಕುತ್ತು ಉಂಟಾಗಬಹುದು.
ಪ್ರಸ್ತುತ ಬಂಗಾರಪೇಟೆ ತಾಲೂಕಿನಲ್ಲಿ ಶೇ. 217 ರಿಂದ 219, ಕೋಲಾರದಲ್ಲಿ ಶೇ. 173ರಿಂದ 175, ಮಾಲೂರು ಶೇ.192 ರಿಂದ 194, ಶ್ರೀನಿವಾಸಪುರ ಶೇ.174 ರಿಂದ 176 ಹಾಗೂ ಮುಳಬಾಗಿಲು ತಾಲೂಕಿನಲ್ಲಿ ಶೇ 208 ರಿಂದ 210ರಷ್ಟು ಅಂತರ್ಜಲ ಬಳಕೆಯಾಗಿದ್ದು ಮಳೆ ಕೊರತೆಯಿಂದ ಅಂತರ್ಜಲ ಪಾತಾಳ ಸೇರುವಂತಾಗಿದೆ.
ಜಿಲ್ಲೆಯಲ್ಲಿ ಸರ್ಕಾರದ ಲೆಕ್ಕದ ಪ್ರಕಾರ 3554ಕ್ಕೂ ಹೆಚ್ಚು ಕೊಳವೆ ಬಾವಿಗಳು, 711 ಕೊಳವೆ ನೀರು ಸರಬರಾಜು ಯೋಜನೆಗಳು ಹಾಗೂ 1436ಕ್ಕೂ ಹೆಚ್ಚು ಕಿರು ನೀರು ಸರಬರಾಜು ಯೋಜನೆಗಳಿದ್ದರೂ ಮಳೆಯಿಲ್ಲದ ಕಾರಣ ಶೇ. 50ಕ್ಕಿಂತ ಹೆಚ್ಚು ಕೊಳವೆ ಬಾವಿಗಳು ಬತ್ತಿ ಹೋಗಿವೆ.
ಸರ್ಕಾರದ ಜನರ ಸಮಸ್ಯೆ ನಿವಾರಣೆಗಾಗಿ ಹೊಸದಾಗಿ ಹತ್ತಾರು ಕೊಳವೆ ಬಾವಿಗಳನ್ನು 1500 ಅಡಿಗಳಷ್ಟು ಆಳದವರೆಗೆ ಕೊರೆಸಿದ್ದರೂ ಹನಿ ನೀರು ಸಿಗದೆ ವಿಫಲವಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಲವಣಾಂಶ: ಮಳೆಗಾಲದಲ್ಲಿ ಕೊಂಚಮಟ್ಟಿಗೆ ಚೇತರಿಕೆ ಕಂಡು ಬೇಸಿಗೆ ಕಾಲದಲ್ಲಿ ಅಂತರ್ಜಲ ಮಟ್ಟದ ಕುಸಿತ ಕಾಣುವ ಕೊಳವೆ ಬಾವಿಗಳ ಮೂಲಕ ಜನತೆಯ ಯತೇಚ್ಛವಾಗಿ ಅಂತರ್ಜಲ ಉಪಯೋಗಿಸುತ್ತಿರುವುದರಿಂದ ನೀರಿನ ಗುಣಮಟ್ಟ ಹಾಳಾಗುತ್ತಿದೆ. ಫ್ಲೋರೈಡ್ ಅಂಶ ನೀರಿನಲ್ಲಿ 1.0 ಮಿ.ಗ್ರಾಂ ಇದ್ದರೆ ಮನುಷ್ಯರ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ನಿವಾರಣೆ ಮಾಡಿಕೊಳ್ಳಬಹುದು. ಆದರೆ, ಜಿಲ್ಲೆಯ ಬಹುತೇಕ ಕಡೆ ಅಂತರ್ಜಲ ಬಳಕೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ದಂತ ಪ್ಲೋರೋಸಿಸಸ್, ಜಠರ ಕರುಳಿನ ಮತ್ತು ಮೂಳೆಗಳ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದಲ್ಲಿ ಅಂಗವಿಕಲತೆ ಹೆಚ್ಚಾಗುತ್ತಿದೆ. ಕ್ಯಾಲ್ಸಿಯಂ ಗರಿಷ್ಠ 200 ಮಿ.ಲೀ ಇರುವುದರಿಂದ ಮೂತ್ರ ಜನಕಾಂಗದ ಮೇಲೆ ಪರಿಣಾಮ ಬೀರುತ್ತಿದೆ. ಮೆಗ್ನಿಷಿಯಂ ಹೆಚ್ಚಳದಿಂದ ಕರುಳಿನ ತೊಂದರೆ ಜಾಸ್ತಿಯಾಗುತ್ತಿದೆ. ಕಬ್ಬಿಣದ ಅಂಶ 0.30 ಮಿ.ಗ್ರಾಂ ಮೀರಿ ಗರಿಷ್ಠ 1.0 ಮಿ.ಲೀ ಆಗಿರುವುದರಿಂದ ನೀರಿನ ರುಚಿಯಲ್ಲಿ ಬದಲಾವಣೆ ಹಾಗೂ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕ್ಲೋರೈಡ್ ಹೆಚ್ಚಳದಿಂದಲೂ ನೀರಿನ ರುಚಿ ಕೆಡುತ್ತಿದೆ. ನೈಟ್ರೇಟ್ 50 ಗ್ರಾ.ಲೀ ಗಿಂತ ಹೆಚ್ಚಾಗಿರುವುದರಿಂದ ನೀರು ಕುಡಿಯಲು ಯೋಗ್ಯವಿಲ್ಲದಂತಾಗಿದೆಯಲ್ಲದೆ, ಮಕ್ಕಳಿಗೆ ಮೆಥಹಿಮೋಗ್ಲೋಬಿಯಾ, ದೊಡ್ಡವರಿಗೆ ಕ್ಯಾನ್ಸರ್ ಸಂಬಂದಿ ಕಾಯಿಲೆಗಳು ಹೆಚ್ಚಾಗಿದೆ. ಸಲ್ಫೇಟ್ ಗರಿಷ್ಠ 400 ಮಿ.ಗ್ರಾಂ. ದಾಟಿದೆ. ಇದರಿಂದ ಕರುಳಿನ ತೊಂದರೆ ಹೆಚ್ಚಾಗುತ್ತಿದೆ. ಅರಣ್ಯ ಭೂಮಿ ನಾಶ, ಅಂತರ್ಜಲ ಮರು ಪೂರಣ ಇಲ್ಲದಿರುವುದು, ತೀವ್ರಗೊಂಡ ಕೃಷಿ ಚಟುವಟಿಕೆ, ವರ್ಷಪೂರ್ತಿ ನೀರಾವರಿ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಿರುವುದು, ಅವೈಜ್ಞಾನಿಕ ಕೃಷಿ ಪದ್ಧತಿ, ಒಂದೇ ಜಮೀನಿನಲ್ಲಿ ಹಲವಾರು ಕೊಳವೆ ಬಾವಿ ಕೊರೆಸುವುದು ಹಾಗೂ ಹಣದಾಸೆಗಾಗಿ ನೀರು ಹೆಚ್ಚು ಸಂಗ್ರಹಣೆ ಮಾಡಿ ವ್ಯಾಪಾರ ಮಾಡುತ್ತಿರುವುದರಿಂದ ಕೋಲಾರ ಜಿಲ್ಲೆಯ ಜನತೆಗೆ ನೀರು ಕಗ್ಗಂಟಾಗಿ ಪರಿಣಮಿಸಿದೆ.
ಶುದ್ಧ ನೀರು ಘಟಕಗಳಿಗೆ ಹೆಚ್ಚಿನ ಅನುದಾನ
ಕೋಲಾರಕ್ಕೆ ಮಂಗಳವಾರ ಆಗಮಿಸುತ್ತಿರುವ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರು ವಿಶೇಷ ಆದ್ಯತೆ ನೀಡುವ ಮೂಲಕ ಶುದ್ಧವಾದ ನೀರು ಒದಗಿಸಲು ಹೆಚ್ಚಿನ ಅನುದಾನ ನೀಡುವ ಮೂಲಕ ಜನರನ್ನು ರಕ್ಷಣೆ ಮಾಡಬೇಕಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡಲು 349 ಶುದ್ಧ ನೀರು ಘಟಕಗಳ ಅಗತ್ಯವಿದ್ದು ಈಗ 141 ಘಟಕಗಳು ಮಾತ್ರ ಮಂಜೂರಾಗಿದೆ ಈ ಬಗ್ಗೆ ಗಮನಹರಿಸುವರೇ ಸಚಿವರು.
ಪಾ.ಶ್ರೀ.ಅನಂತರಾಮ್