ನಾಮಫಲಕದಲ್ಲಿ ಕೈಬಿಟ್ಟ ಹೆಸರು; ಗುಂಪುಗಳ ನಡುವೆ ಮಾತಿನ ಚಕಮಕಿ
ಕ.ಪ್ರ. ವಾರ್ತೆ ಚಿಂತಾಮಣಿ ಜ. 6
ನಾಮ ಫಲಕದಲ್ಲಿ ಹೆಸರನ್ನು ಕೈಬಿಟ್ಟಿರುವ ಸಂಬಂಧ ಮಾಜಿ ಶಾಸಕ ಸುಧಾಕರ್ ಬೆಂಬಲಿತ ಗುಂಪೊಂದು ಪ್ರಶ್ನಿಸಿದಾಗ ಇದಕ್ಕೆ ವಿರೋಧಿಸಿದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಗುಂಪು ಪರ- ವಿರೋಧ ಮಾತಿನ ಚಕಮಕಿ ನಡೆದು ಪರಸ್ಪರ ಚೇರುಗಳಲ್ಲಿ ಹೊಡೆದಾಡಿರುವ ಘಟನೆ ನಡೆದಿದೆ.
ತಾಲೂಕಿನ ಮುಂಗಾನಹಳ್ಳಿ ಹೋಬಳಿ ಬಟ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಗ್ರಾಮ ಪಂಚಾಯ್ತಿ ಕಾರ್ಯಾಲಯ ಹಾಗೂ ಕೆ.ಆರ್.ಐ.ಡಿ.ಎಲ್ ಚಿಕ್ಕಬಳ್ಳಾಪುರ ಉಪ ವಿಭಾಗ ಅವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯ್ತಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕ ಸುಧಾಕರ್ ಬೆಂಬಲಿತ ಕಾರ್ಯಕರ್ತರು ಹಾಗೂ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರ ಕಾರ್ಯಕರ್ತರಿಗೂ ಮಾತಿಗೆ ಮಾತು ಬೆಳೆದಿದೆ.
ನಡೆದಿದ್ದೇನು? ಸಭೆ ಪ್ರಾರಂಭಕ್ಕೂ ಮುನ್ನ ಕೆಲವೇ ನಿಮಿಷಗಳಲ್ಲಿ ನಬಾರ್ಡ್ ಅನುದಾನದಲ್ಲಿ ಮಾಜಿ ಶಾಸಕ ಸುಧಾಕರ್ ಗ್ರಾಮ ಪಂಚಾಯ್ತಿ ನೂತನ ಕಟ್ಟಡಕ್ಕೆ ಈ ಹಿಂದೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಹಾಗಾಗಿ ಕಟ್ಟಡ ಉದ್ಘಾಟನೆಗೂ ಹೆಸರನ್ನು ಸೇರಿಸಬೇಕು ಎಂಬುದು ಬೆಂಬಲಿಗರ ವಾದವಾಗಿತ್ತು. ಇದರಿಂದ ಎರಡೂ ಗುಂಪುಗಳ ನಡುವಿನ ಗಲಾಟೆಯಿಂದ ಕೆಲ ಸಮಯ ಸಭೆಯು ಉದ್ವಿಘ್ನ ಪರಿಸ್ಥಿತಿ ಇತ್ತು. ಪೊಲೀಸರು ಆಗಮಿಸಿ ಗಲಾಟೆ ತಿಳಿಗೊಳಿಸಿದರು. ನಂತರ ಸಭೆಯು ಶಾಂತಿಯುತವಾಗಿ ನಡೆಯಿತು.