ಮಹಿಳೆ ಜ್ಞಾನ ತಪ್ಪಿಸಿ ಚಿನ್ನದ ಸರ, ನಗ, ನಾಣ್ಯ ಕಳವು
ಬಂಗಾರಪೇಟೆ: ಮಹಿಳೆಯೊಬ್ಬರಿಗೆ ಜ್ಞಾನತಪ್ಪಿಸಿ ಅವರ ಬಳಿಯಿದ್ದ ಚಿನ್ನದ ಸರ, 8 ಚಿನ್ನದ ಗುಂಡುಗಳು ಮತ್ತು ಎರಡು ಲಕ್ಷ್ಮಿ ನಾಣ್ಯಗಳನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.
ತಾಲೂಕಿನ ಕಣಿಂಬೆಲೆ ಗ್ರಾಮದ ರಾಮಪ್ಪ ಎಂಬುವರ ಪತ್ನಿ ರಾಮಕ್ಕ ಎಂಬುವರೇ ಮೋಸಕ್ಕೆ ಒಳಗಾದ ಮಹಿಳೆ. ಪಟ್ಟಣದಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದು ನಂತರ ಗ್ರಾಮಕ್ಕೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಾಗ ಅಪರಿಚಿತ ಇಬ್ಬರು ಮಹಿಳೆಯರು ಕೆಳಗೆ ಪರ್ಸ್ ಬಿಸಾಡಿ ನಿಮ್ಮ ಪರ್ಸ್ ಬಿದ್ದಿದೆ ನೋಡಿ ಎಂದು ಹೇಳಿದ್ದಾರೆ. ಅದು ನನ್ನದಲ್ಲ ಎಂದು ಹೇಳುವಷ್ಟರಲ್ಲಿ ರಾಮಕ್ಕಳಿಗೆ ಜ್ಞಾನತಪ್ಪುವಂತೆ ಮಾಡಿ ನಂತರ ಆಕೆಯನ್ನು ರೇಲ್ವೆ ನಿಲ್ದಾಣ ಬಳಿಯಿರುವ ಟೂನ್ ಪಾರ್ಕ್ ಹಿಂಭಾಗಕ್ಕೆ ಕರೆದೋಯ್ಡು ಸರಗಳನ್ನು ಕಳವು ಮಾಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಒಂಟಿ ಮಹಿಳೆಯರನ್ನು ವಂಚಿಸಿ ಚಿನ್ನದ ಸರ ಕಸಿದುಕೊಂಡು ಹೋಗಿರುವ 3ನೇ ಪ್ರಕರಣವಾಗಿದೆ.
ಪಟ್ಟಣದಲ್ಲಿ ಇಂತಹ ಅಪರಾಧ ಚಟುವಟಿಕೆಗಳು ಮಿತಿಮೀರಿ ನಡೆಯುತ್ತಿದ್ದರೂ ಪೊಲೀಸರು ಇದುವರೆಗೂ ಯಾವೊಬ್ಬ ಆರೋಪಿಯನ್ನೂ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ . ಎಸ್ಪಿ ಡಾ. ರೋಹಿಣಿ ಸಫೆಟ್ ಅವರು ಬರೀ ಕೆಜಿಎಫ್ ನಗರಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.