ಸಾರ್ವಜನಿಕ ದೂರುಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ
ಚಿಂತಾಮಣಿ: ಗ್ರಾಮೀಣ ಪ್ರದೇಶದ ಜನರಿಗೆ ಅಧಿಕಾರಿಗಳು ಸ್ಪಂದಿಸಿ ಅಹವಾಲು, ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಸಲಹೆ ನೀಡಿದರು.
ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ಕೆ.ಆರ್.ಐ.ಡಿ.ಎಲ್ ಚಿಕ್ಕಬಳ್ಳಾಪುರ ಉಪ ವಿಭಾಗದ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯ್ತಿ ನೂತನ ಕಟ್ಟಡಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಡಿಭಾಗದ ವ್ಯಾಪ್ತಿಯಲ್ಲಿರುವ ಮುಂಗಾನಹಳ್ಳಿ ಹೋಬಳಿಯು ಜನರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಗ್ರಾಮ ಪಂಚಾಯ್ತಿ ಅಭಿವೃಧ್ಧಿ ಅಧಿಕಾರಿ, ಕಾರ್ಯದರ್ಶಿ ಸೇರಿದಂತೆ ಇನ್ನೂ ಹಲವು ಅಧಿಕಾರಿಗಳು ಕಚೇರಿಯಲ್ಲೇ ದಿನನಿತ್ಯ ಹಾಜರಾಗಿ ಜನರನ್ನು ಪರದಾಡಿಸದಂತೆ ಕೆಲಸ ನಿರ್ವಹಿಸಬೇಕೆಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ನೀಡುವ 50 ಸಾವಿರ ಅನುದಾನವನ್ನು ಸ್ವಸಹಾಯ ಸಂಘಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಮುಂದಾಗಬೇಕೆಂದು ಸಭೆಯಲ್ಲಿ ನೆರೆದಿದ್ದ ನೂರಾರು ಮಹಿಳೆಯರಿಗೆ ಅರಿವು ಮೂಡಿಸಿದರು. ರೈತರಿಗೆ ಅಧಿಕಾರಿಗಳು ಬೆಳೆಯುವ ಬೆಳೆ ಬಗ್ಗೆ ಸರಿಯಾದ ಮಾಹಿತಿ ನೀಡಿದರೆ ರೈತರು ಸಾಲದ ಬಾಧೆಯಿಂದ ಪಾರಾಗಲು ಸಾಧ್ಯವೆಂದು ಶಾಸಕರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ನಂತರ ಜಲಾಯನ ಇಲಾಖೆ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 50 ಸಾವಿರ ಚೆಕ್‌ನ್ನು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ವಿವಿಧ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಗೌರಮ್ಮ ನಾಗೇಶ್, ಜಿಪಂ ಸದಸ್ಯ ವೀಣಾಗಂಗುಲಪ್ಪ, ಎಪಿಎಂಸಿ ಅಧ್ಯಕ್ಷ ಎಸ್.ವಿ. ನಾರಾಯಣಸ್ವಾಮಿ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ರೆಡ್ಡಪ್ಪ, ಮುಖಂಡರಾದ ಯನುಮಲಪಾಡಿ ಚಂದ್ರಾರೆಡ್ಡಿ, ಕೃಷ್ಣಮೂರ್ತಿ, ರಾಗುಟ್ಟಹಳ್ಳಿ ರಘುನಾಥರೆಡ್ಡಿ, ಶ್ರೀರಾಮರೆಡ್ಡಿ, ಅಧಿಕಾರಿಗಳಾದ ಕುಶಾಲಪ್ಪ, ಸುಬ್ಬಾರೆಡ್ಡಿ, ಶ್ರೀನಿವಾಸರೆಡ್ಡಿ, ಈಶ್ವರ್, ವೆಂಕಟರಮಣಪ್ಪ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.