ಸುದ್ದಿ ಸಂಕ್ಷೇಪ
ಸಚಿವ ಎಚ್.ಕೆ. ಪಾಟೀಲ್ ಸ್ವಾಗತಕ್ಕೆ ಕಾಂಗ್ರೆಸ್ ಸಿದ್ಧತೆ
ಕೋಲಾರ: ಜಿಲ್ಲೆಗೆ ಮಂಗಳವಾರ ಆಗಮಿಸುತ್ತಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಅದ್ಧೂರಿ ಸ್ವಾಗತ ಕೋರಲು ಜಿಲ್ಲಾ ಕಾಂಗ್ರೆಸ್ ನಿರ್ಧರಿಸಿದೆ. ನಗರದ ಪ್ರವಾಸಿ ಮಂದಿರಕ್ಕೆ ಬೆಳಿಗ್ಗೆ 10.30ಕ್ಕೆ ಆಗಮಿಸಲಿರುವ ಸಚಿವರನ್ನು ಬರಮಾಡಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಘಟಕಗಳ ಪದಾಧಿಕಾರಿಗಳು ಸೇರಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್ ತಿಳಿಸಿದ್ದಾರೆ.
ವಯೋಶ್ರೇಷ್ಠ ಸಮ್ಮಾನ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: 14ನೇ ಸಾಲಿನ 2014ನೇ ಸಾಲಿನ ಹಿರಿಯ ನಾಗರಿಕರಿಗೆ ವಯೋಶ್ರೇಷ್ಠ ಸಮ್ಮಾನ ರಾಷ್ಟ್ರ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಕಲ್ಯಾಣಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲಾ ಕಚೇರಿಯಿಂದ ಪಡೆದು ಜ.10 ರೊಳಗೆ ಸಲ್ಲಿಸಬೇಕೆಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಸ್. ಸತೀಶ್ ಅವಿರೋಧ ಆಯ್ಕೆ
ಕೋಲಾರ: ವಕೀಲರ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಎಸ್. ಸತೀಶ್ ಪ್ರಧಾನ ಕಾರ್ಯದರ್ಶಿಯಾಗಿ, ಪಿ. ನಂಜುಂಡೇಶ್ವರ ಉಪಾಧ್ಯಕ್ಷರಾಗಿ, ಜಂಟಿ ಕಾರ್ಯದರ್ಶಿಯಾಗಿ ವೈ.ಸಿ. ಸೋಮಪ್ಪ, ಖಜಾಂಚಿಯಾಗಿ ಎಸ್.ಬಿ. ಚಂದ್ರಪ್ಪ, ಕಾರ್ಯಕಾರಿ ಸಮಿತಿಗೆ ಮಹಿಳಾ ಮೀಸಲು ಕ್ಷೇತ್ರದಿಂದ ಎಂ.ವಿ. ರತ್ನಮ್ಮ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸೋಮಣ್ಣ ತಿಳಿಸಿದ್ದಾರೆ.
ನಾಳೆ ನಗರಾಭಿವೃದ್ಧಿ ಸಚಿವರ ಪ್ರವಾಸ
ತುಮಕೂರು: ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ಜನವರಿ 8 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ಅಂದು ಬೆಳಿಗ್ಗೆ 10.30 ಕ್ಕೆ ತುಮಕೂರಿಗೆ ಆಗಮಿಸುವ ಸಚಿವರು, ಬೆಳಿಗ್ಗೆ 11 ಗಂಟೆಗೆ ತುಮಕೂರು ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡುವರು. ಮಧ್ಯಾಹ್ನ 2.30 ಗಂಟೆಗೆ ತುಮಕೂರಿನ ಟೂಡಾ ಸಭಾಂಗಣದಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು. ನಂತರ ಸಂಜೆ 4 ಗಂಟೆಗೆ ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಮಾಡುವರು.
ಗ್ರಾಮೀಣ ಪ್ರತಿಭೆ ಪ್ರೋತ್ಸಾಹಿಸಿ; ನಂಜೇಗೌಡ
ಟೇಕಲ್: ಗ್ರಾಮೀಣ ಯುವಕರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದರಿಂದ ಯುವಕರಲ್ಲಿನ ಸುಪ್ತ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಸ.ಹಿ.ಪ್ರ.ಶಾಲೆಯ ಆವರಣದಲ್ಲಿ ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದೊಡ್ಡಮಲ್ಲೆ ತಾಯಿಬೇರು ಜಾನಪದ ಕಲಾ ತಂಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಾಲೂರು ತಾಲೂಕು ಮಟ್ಟದ ಯುವಜನ ಮೇಳ ಉದ್ಘಾಟಿಸಿ ಮಾತನಾಡಿದರು.
ಕೆಲವು ಹಳ್ಳಿ ಸೊಗಡಿನ ಯುವ ಮಿತ್ರರು ಗ್ರಾಮಗಳಲ್ಲೇ ಉಳಿದು ತಮ್ಮ ಕಾಯಕ ನೆರವೇರಿಸುತ್ತಿದ್ದಾರೆ. ಅಂತಹವರ ಸಾರ್ಥಕ ಸೇವೆಯನ್ನು ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಶಾಸಕ ಕೆ.ಎಸ್. ಮಂಜುನಾಥಗೌಡರಿಗೆ ಜನ್ಮದಿನದ ಶುಭಾಷಯ ಕೋರಿದರು. ನಂತರ ಶಾಲಾ ಮಕ್ಕಳಿಗೆ ಸಿಹಿ ಹಂಚಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ತಾ. ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಉಪಾಧ್ಯಕ್ಷ ಎ.ಕೆ. ವೆಂಕಟೇಶ್, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಇ. ಕೃಷ್ಣೇಗೌಡ, ತಾಯಿ ಬೇರು ಜಾನಪದ ಕಲಾ ತಂಡದ ಯುವ ಪ್ರಶಸ್ತಿ ವಿಜೇತ ದೊಡ್ಡಮಲ್ಲೆ ರವಿ ಮುಂತಾದವರು ಸಭೆಯಲ್ಲಿ ಮಾತನಾಡಿದರು.
ಅರ್ಹರಿಗೆ ತಲುಪದ ಸವಲತ್ತು; ದಸಂಸ ಧರಣಿ
ಗುಡಿಬಂಡೆ: ಬಡ ಜನರ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಈ ಎಲ್ಲಾ ಸವಲತ್ತುಗಳು ಅರ್ಹರಿಗೆ ತಲುಪದೆ ರಾಜಕೀಯ ಮುಖಂಡರ ಹೆಸರಿನಲ್ಲಿ ಬಂಡವಾಳಶಾಹಿಗಳ ಜೇಬಿಗೆ ಸೇರುತ್ತಿದೆ ಎಂದು ಆರೋಪಿಸಿ ದಸಂಸ ಮುಖಂಡರು ಪಟ್ಟಣದ ಮಿನಿವಿಧಾನಸೌಧ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದರು. ಇತ್ತೀಚೆಗೆ ಸೋಮೇನಹಳ್ಳಿ ಗ್ರಾಪಂ ಕಚೇರಿಯಲ್ಲಿ ದಾಖಲಾತಿಗಳು ಸುಟ್ಟು ಹೋಗಿರುವ ಬಗ್ಗೆ ಸಿಐಡಿ ತನಿಖೆಗೆ ಒಳಪಡಿಸಬೇಕು, 2005 ರಿಂದ 2013-14ನೇ ಸಾಲಿನವರೆಗೆ ಗುಡಿಬಂಡೆ ತಾಲೂಕಿನ ಎಲ್ಲಾ ಪಂಚಾಯತಿಗಳಿಗೆ ನೀಡಲಾದ ಅನುದಾನಗಳ ಬಗ್ಗೆ ತನಿಖೆ ನಡೆಸಬೇಕು. ಪಂಚಾಯತಿ ಜನಪ್ರತಿನಿಧಿಗಳು ತಮ್ಮ ಸಂಬಂಧಿಗಳು ಗುತ್ತಿಗೆ ನಿರ್ವಹಿಸಿರುವ ಕಾಮಗಾರಿಗಳ ಬಗ್ಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯವರನ್ನು ಜಾತಿ ನಿಂದನೆ ಮತ್ತು ವೈಯುಕ್ತಿಕ ತೇಜೋವಧೆ ಮಾಡಿರುವ ತಾ.ಪಂ. ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ನಿರತ ಮುಖಂಡರು ಆಗ್ರಹಿಸಿದರು.
ಬ್ರಾಹ್ಮಣರ ಸಂಘದ ಸಭೆ
ಮಾಲೂರು: ಮಾಲೂರು ಬ್ರಾಹ್ಮಣರ ಸಂಘದ ಅಧ್ಯಕ್ಷ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಬ್ರಾಹ್ಮಣರ ಸಂಘದ ಸಭೆ ಪಟ್ಟಣದ ಶ್ರೀಮಠದಲ್ಲಿ ನಡೆಯಿತು.
ಸಂಘದ 12 ಸದಸ್ಯರು ಸಭೆಯಲ್ಲಿ ಭಾಗವಹಿಸಿ ಫೆ.8ರಂದು ನಡೆಯಲಿರುವ ಶ್ರೀ ಮಧ್ವ ನವಮಿಯನ್ನು ಪ್ರತಿವರ್ಷದಂತೆ ಈ ಬಾರಿಯು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಯಿತು.
ಶ್ರೀ ಮಠದಲ್ಲಿ ಆರ್ಚಕರ ಕೊರತೆ ಹಾಗೂ ಶ್ರೀ ಮಠದ ನಿರ್ವಹಣೆ ಬಗ್ಗೆ ಚರ್ಚಿಸಲಾಗಿ ಅಂಜನ್‌ಕುಮಾರ್ ಶರ್ಮ ಕೋರಿಕೆಯಂತೆ ಶ್ರೀ ಮಠದ ಸಂಪೂರ್ಣ ನಿರ್ವಹಣೆಯನ್ನು ಅವರಿಗೆ ನೀಡುವಂತೆ ನಿರ್ಣಯ ಕೈಗೊಳ್ಳಲಾಯಿತು.
ಪಟ್ಟಣದ ಹೊರ ವಲಯದ ಹೊಸೂರು ರಸ್ತೆಯಲ್ಲಿ ಬ್ರಾಹ್ಮಣರ ಸಂಘದ ವತಿಯಿಂದ ನಿರ್ಮಿಸಲಾಗುತ್ತಿರುವ ಬ್ರಾಹ್ಮಣರ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿ ಅರ್ಥಿಕ ಮುಗಟ್ಟಿನಿಂದ ನಿಂತಿದೆ.
ಈ ಬಗ್ಗೆ ಚರ್ಚೆ ನಡೆಸಿ ಕಾಮಗಾರಿ ಪೂರ್ಣಗೊಳಿಸಲು ವಿದ್ಯಾರ್ಥಿ ನಿಲಯ ನಿಮಾರ್ಣ ಸಮಿತಿಯ ಅಧ್ಯಕ್ಷ ಜೈರಾವ್ ಅವರ ಸಮಿತಿಗೆ ಹೊಸ ವ್ಯಕ್ತಿಗಳನ್ನು ಸೇರಿಸಿ ಬಾಕಿ ಉಳಿದಿರುವ 5 ಲಕ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಲಾಯಿತು. ಮುಂದಿನ ಹದಿನೈದು ದಿನದೊಳಗೆ ಮತ್ತೊಂದು ಸಭೆ ಕರೆಯುವಂತೆ ತಿಳಿಸಿದರು., ಕಾರ್ಯದರ್ಶಿ ಚಂದ್ರಶೇಖರ್, ಕಾರ್ಯಕಾರಿ ಸಮಿತಿ ಭದ್ರಿ, ರಾಘವೇಂದ್ರ, ಚಂದ್ರು, ರಾಜೇಂದ್ರ ವೈದ್ಯ, ಅಂಜನ್‌ಕುಮಾರ್ ಶರ್ಮ, ವೆಂಕಟರಾವ್, ಶ್ರೀಕಾಂತ್ ಕುಲಕರ್ಣಿ, ಇಂದಿರಮ್ಮ, ಸುಮಿತ್ರಮ್ಮ, ಭಾಸ್ಕರ್, ದ್ವಾರಕನಾಥ್ ಇದ್ದರು.
ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ರಸ್ತೆಗಳಿಗೆ ಮುಕ್ತಿ
ಕ.ಪ್ರ. ವಾರ್ತೆ ಕೋಲಾರ ಜ. 6
ನಗರದ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಅನೇಕ ವರ್ಷಗಳಿಂದ ದುರಸ್ತಿ ಕಾಣದೆ ಸೊರಗಿದ್ದ ರಸ್ತೆಗಳಿಗೆ ಕಡೆಗೂ ಮುಕ್ತಿ ಸಿಕ್ಕಿದೆ.
ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ನ್ಯಾಯಾಲಯ, ತಾಲೂಕು ಕಚೇರಿ, ಕೃಷಿ ಮತ್ತು ತೋಟಗಾರಿಕೆ ಕಚೇರಿ, ಕೈಗಾರಿಕಾ ಕೇಂದ್ರ, ಅಬಕಾರಿ ಹಾಗೂ ವಾರ್ತಾ ಇಲಾಖೆ ಕಚೇರಿಗಳನ್ನು ಒಳಗೊಂಡಿರುವ ಜಿಲ್ಲಾಡಳಿತ ಸಂಕೀರ್ಣದಲ್ಲಿ ಕಿರಿದಾದ ಹಾಗೂ ದುರಸ್ತಿ ಇಲ್ಲದೆ ಹಾಳಾಗಿದ್ದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಸಣ್ಣ ರಸ್ತೆಗಳಲ್ಲಿ ಕಾರು, ಜೀಪು ಓಡಾಡುವುದಕ್ಕೆ ಕಷ್ಟವಾಗಿತ್ತು, ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು, ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಗಿಂತ ಕಡೆಯಾಗಿ ಜನತೆ ಕಿರಿಕಿರಿ ಅನುಭವಿಸುವಂತಾಗಿತ್ತು.
ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗೆ ಭೇಟಿ ನೀಡಲು ಹೋಗಿದ್ದಾಗ ರಸ್ತೆಗಳು ಹಾಳಾಗಿರುವುದನ್ನು ಗಮನಿಸಿ ಜಿಲ್ಲಾಡಳಿತ ಪ್ರಾಂಗಣದಲ್ಲೇ ರಸ್ತೆಗಳು ಈ ಮಟ್ಟಿಗೆ ಇದ್ದರೆ ಇನ್ನು ಬೇರೆ ಕಡೆಯ ಪರಿಸ್ಥಿತಿ ಏನಾಗಿರಬಹುದೆಂದು ಅನುಮಾನ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿ ಡಿ.ಕೆ. ರವಿಯವರ ಟೀಕೆಯಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದೀಗ ಜಿಲ್ಲಾಡಳಿತ ಕಚೇರಿಯ ಸುತ್ತ ಕಿರಿದಾದ ರಸ್ತೆಗಳ ಅಗಲೀಕರಣ, ಜಲ್ಲಿ ಬಿಚಾವಣೆ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ.
ಇದೇ ರೀತಿ ಕೋಲಾರ ನಗರದ ಮೆಕ್ಕೆ ವೃತ್ತ ಸೇರಿದಂತೆ ವಿವಿಧ ಕಡೆ ರಸ್ತೆಗಳ ಅಭಿವೃದ್ಧಿಯಾದಲ್ಲಿ ಮಾತ್ರ ನಗರದ ಸೌಂದರ್ಯ ಹೆಚ್ಚುತ್ತದೆ ಜೊತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದು ಜನತೆಯ ಒತ್ತಾಸೆಯಾಗಿದೆ.