ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಒಕ್ಕಲಿಗರ ಸಂಘದ ಚುನಾವಣೆ; ರಮೇಶ್, ರಾಮು, ಸತೀಶ್ ಆಯ್ಕೆ

Vishwanath S
Updated On : 8 Jan 2014, 1:08 am

ಕೋಲಾರ: ರಾಜ್ಯ ಒಕ್ಕಲಿಗರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದ ಯಲುವಳ್ಳಿ ರಮೇಶ್ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ.
ಕೋಲಾರ-ಚಿಕ್ಕಬಳ್ಳಾಪುರ ಸಂಯುಕ್ತ ಜಿಲ್ಲೆಯ 3 ನಿರ್ದೇಶಕ ಸ್ಥಾನಗಳಿಗೆ ಜ.5 ರಂದು ಚುನಾವಣೆ ನಡೆದು ಜ.6 ರಂದು ಭಾನುವಾರ ಮತ ಏಣಿಕೆ ಆಗಿತ್ತು. ಚಿಕ್ಕಬಳ್ಳಾಪುರದ ಯಲುವಳ್ಳಿ ರಮೇಶ್ 13150 ಮತ ಪಡೆದರೆ, ಕೋಲಾರದ ವಕ್ಕಲೇರಿ ರಾಮಚಂದ್ರ 15420 ಹಾಗೂ  ಎಂ.ಎಲ್. ಸತೀಶ್ 12339 ಮತ ಪಡೆದು ಚುನಾಯಿತರಾಗಿದ್ದಾರೆ. ಈ ಪೈಕಿ ಯಲುವಳ್ಳಿ ರಮೇಶ್ ಅವರದ್ದು ಹ್ಯಾಟ್ರಿಕ್ ಸಾಧನೆಯಾದರೆ, ವಕ್ಕಲೇರಿ ರಾಮು ಮತ್ತು ಸತೀಶ್ ಅವರು ಇದೇ ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ. ತೀವ್ರ ಪೈಪೋಟಿ ಒಡ್ಡಿದ್ದ ಡಾ. ಡಿ.ಕೆ. ರಮೇಶ್ -11304 ಮತ ಪಡೆದು 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಕಳೆದ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ನವೀನ್‌ಕುಮಾರ್ (8787ಮತ), ಹಾಗೂ ಆರ್. ನಂಜುಂಡಗೌಡ ( 3997 ಮತ) ಪಡೆದರೆ, ಹೊಸದಾಗಿ ಸ್ಪರ್ಧಿಸಿದ್ದ ಎಂ.ಎನ್. ಸದಾಶಿವರೆಡ್ಡಿ, ಕೆ.ಬಿ. ಗೋಪಾಲಕೃಷ್ಣ, ಪಿ.ನಾಗರಾಜ, ಡಿ. ರಾಮಚಂದ್ರ, ರಂಗನಾಥ್, ಕಲ್ಲಂಡೂರು ಲೋಕೇಶ್, ಲೋಕೇಶ್‌ಗೌಡ, ಎನ್. ನರಸಿಂಹರೆಡ್ಡಿ ಪಡೆದು ಸೋತಿದ್ದಾರೆ.
ರೋಗಿ ಸಾವು: ವೈದ್ಯರ ವಿರುದ್ಧ ದೂರು
ಚಿಂತಾಮಣಿ: ಚಿಕಿತ್ಸೆಗಾಗಿ ಬಂದ ರೋಗಿಗೆ ವೈದ್ಯರು ನಿರ್ಲಕ್ಷ್ಯ ತೋರಿದ ಪರಿಣಾಮ ರೋಗಿಯೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬುರುಡುಗುಂಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಘಟನೆ ವಿವರ: ಶಿಡ್ಲಘಟ್ಟ ತಾಲೂಕಿನ ಸಟ್ರೋಲ್‌ಹಳ್ಳಿ ಗ್ರಾಮದ ವೆಂಕಟರವಣ (35) ಎಂಬಾತ ಜ್ವರದಿಂದ ನರಳುತ್ತಿದ್ದ.
ಈ ನಿಟ್ಟಿನಲ್ಲಿ ಶನಿವಾರ ಬುರುಡಗುಂಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದಾಗ ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲ. ಬದಲಾಗಿ ಡಿ.ಗ್ರೂಪ್ ನೌಕರ ಶ್ರೀನಿವಾಸ್ ಎಂಬಾತ ಚುಚ್ಚುಮದ್ದು ನೀಡಿದ್ದ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಭಾನುವಾರ ವೆಂಕಟರವಣ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣ ರೋಗಿಯನ್ನುನಗರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಸಂಬಂಧಿಕರು  ವೈದ್ಯರುಹಾಗೂ ಡಿ ಗ್ರೂಪ್ ನೌಕರನ ವಿರುದ್ಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಇಬ್ಬರ ಆರೋಪಿಗಳ ವಿರುದ್ಧ ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ರಸ್ತೆ ನಿರ್ಮಾಣ; ಶಾಸಕರಿಗೆ  ಗ್ರಾಮಸ್ಥರಿಂದ ಮನವಿ
ಚಿಂತಾಮಣಿ: ಚೀಮನಹಳ್ಳಿ ಗ್ರಾಮಕ್ಕೆ ಸರಿಯಾದ ರಸ್ತೆ ಮಾರ್ಗಲ್ಲದೆ ಗ್ರಾಮಸ್ಥರು ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮದ ಮುಖಂಡರು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರಿಗೆ ತಮ್ಮ ಸಮಸ್ಯೆ ತೋಡಿಕೊಂಡರು.
ತಾಲೂಕಿನ ದೊಡ್ಡಗಂಜೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ 8ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಚೀಮನಹಳ್ಳಿ ಗ್ರಾಮಸ್ಥರು ಮೂಲ ಸಮಸ್ಯೆಗಳ ಬಗ್ಗೆ ಶಾಸಕರ ಮುಂದೆ ತಮ್ಮ ಸಮಸ್ಯೆ ತಿಳಿಸಿದರು.
ಇದೇ ವೇಳೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ಚೀಮನಹಳ್ಳಿ ಗ್ರಾಮಕ್ಕೆ ಸಂಬಂಧಿಸಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರವೇ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಂದಾಗುವುದಾಗಿ ಭರವಸೆ ನೀಡಿದರು.
ನಂತರ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು. ಮುಖ್ಯ ಶಿಕ್ಷಕಿ ಗೋವರ್ಜಾನ್, ಸಹ ಶಿಕ್ಷಕರಾದ ಜಿ.ಕೆ.ಶ್ರೀಧರ್‌ಬಾಬು, ಅಂಕಿರೆಡ್ಡಿ ಪ್ರಕಾಶ್,ನಾರಾಯಣಮೂರ್ತಿ, ಎಸ್‌ಡಿಎಂಸಿ ಸದಸ್ಯರಾದ ಯಶೋಧಮ್ಮ, ರಹಮತ್ ಉನ್ನೀಸಾ,ಮುಖಂಡರಾದ ರಘುನಾಥರೆಡ್ಡಿ, ಗೋಪಾಲರೆಡ್ಡಿ, ಆಂಜನೇಯರೆಡ್ಡಿ, ಪೋಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.
ಕಟ್ಟಡ ಉಪಯೋಗಕ್ಕೆ ಲಿಖಿತ ಆದೇಶ
ಶಿಡ್ಲಘಟ್ಟ: ಜ.3 ರಂದು 'ಕನ್ನಡಪ್ರಭ'ದಲ್ಲಿ ಪ್ರಕಟವಾದ 'ಕಟ್ಟಡಗಳಿದ್ದರೂ ಕಾರ್ಯ ನಿರ್ವಹಿಸುತ್ತಿಲ್ಲ' ಶೀರ್ಷಿಕೆಯಲ್ಲಿ ಪ್ರಕಟಗೊಂಡ ಸುದ್ದಿಗೆ ಕೂಡಲೇ ಸ್ಪಂದಿಸಿರುವ  ಇಲ್ಲಿನ ತಹಸೀಲ್ದಾರ್ ವಿ.ನಾರಾಯಣಸ್ವಾಮಿ, ಕಂದಾಯ ನಿರೀಕ್ಷರಿಗೆ ನೋಟಿಸ್ ನೀಡಿ ಒಂದು ವಾರದಲ್ಲಿ ಕ್ರಮ ಜರುಗಿಸಬೇಕು ಎಂದು ಲಿಖಿತ ಆದೇಶ ನೀಡಿದ್ದು, ಅಲ್ಲದೆ ಈ ಸಂಬಂಧ ಜಿಲ್ಲಾಧಿಕಾರಿಯವರ ಗಮನಕ್ಕೂ ವಿಚಾರ ತಿಳಿಸಲಾಗಿದೆ ಎಂದು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ರಸ್ತೆಗೆ ಅಡ್ಡಲಾಗಿ ನೆಟ್ಟಿರುವ ಕಲ್ಲು ಚಪ್ಪಡಿ ತೆರವಿಗೆ ಆಗ್ರಹ
ಶಿಡ್ಲಘಟ್ಟ: ರಸ್ತೆಗೆ ಅಡ್ಡಲಾಗಿ ನೆಟ್ಟಿರುವ ಕಲ್ಲು ಚಪ್ಪಡಿಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ತಾಲೂಕಿನ ಈ. ತಿಮ್ಮಸಂದ್ರ ಗ್ರಾಪಂ ವರಸಂದ್ರ ಗ್ರಾಮದ ಮಹಿಳೆಯರು ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದರು. ಸಮಾಜ ಸೇವಕ ಸಮೀಉಲ್ಲಾ ನೇತೃತ್ವದಲ್ಲಿ ತಹಸೀಲ್ದಾರ್ ರಮೇಶ್ ಅವರಿಗೆ ಮನವಿ ಸಲ್ಲಿಸಿದ ಮಹಿಳೆಯರು, ಸುಮಾರು 8 ತಿಂಗಳ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿ ಭೂ ಮಾಪನ ಇಲಾಖೆಯಿಂದ ಸರ್ವೆ ಮಾಡಿಸಿ ಅಡ್ಡಲಾಗಿದ್ದ ಕಲ್ಲು  ಚಪ್ಪಡಿ ತೆರವುಗೊಳಿಸಬೇಕೆಂದು ತಾಲೂಕು ದಂಡಾಧಿಕಾರಿ ಆದೇಶವನ್ನು ಕೆಲವರು ವಿರೋಧಿಸಿದ್ದು, ಇದರಿಂದ ಗ್ರಾಮದಲ್ಲಿ ಅನಾವಶ್ಯಕವಾಗಿ ಉದ್ರಿಕ್ತ ವಾತಾವರಣ ನಿರ್ಮಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ರಸ್ತೆಗ ಅಡ್ಡಲಾಗಿರುವ ಕಲ್ಲು ಚಪ್ಪಡಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯರು ಒತ್ತಾಯಿಸಿದರು. ಗ್ರಾಮದ ಮಹಿಳಾ ಸಂಘದ ಸದಸ್ಯರಾದ ಅರುಣಮ್ಮ, ವೆಂಕಟರೋಣಮ್ಮ, ಲಕ್ಷ್ಮೀದೇವಮ್ಮ, ಗಂಗಮ್ಮ ಸೇರಿದಂತೆ 60ಕ್ಕೂ ಅಧಿಕ ಮಹಿಳೆಯರು ಪ್ರತಿಭಟನೆಯಲ್ಲಿಭಾಗವಹಿಸಿದ್ದರು.
ದೇಗುಲದ ಲಕ್ಷಾಂತರ ರು. ಬೆಲೆ ನಗ ನಾಣ್ಯ ದರೋಡೆ
ಬಾಗೇಪಲ್ಲಿ: ದೇವಾಲಯದ ಬಾಗಿಲು ಮುರಿದು ಲಕ್ಷಾಂತರ ರು. ಬೆಲೆ ಬಾಳುವ ಚಿನ್ನಾಭರಣ ಸೇರಿದಂತೆ ನಗದನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ಗೂಳೂರು ಹೋಬಳಿ ಮುಲ್ಲಂಗಿಚೆಟ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಗೂಳೂರು ಹೋಬಳಿಯ ತಿಮ್ಮಂಪಲ್ಲಿ ಗ್ರಾ.ಪಂ ವ್ಯಾಪ್ತಿಯ ಮುಲ್ಲಂಗಿಚೆಟ್ಲಪಲ್ಲಿ ಗ್ರಾಮದ ಪ್ರಸಿದ್ಧ ಶ್ರೀಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಕಬ್ಬಿಣದ ಮುಖ್ಯ ಬಾಗಿಲನ್ನು ಮೀಟಿ ಒಳನುಗ್ಗಿರುವ ಕಳ್ಳರು, ಗರ್ಭಗುಡಿಯ ಬಾಗಿಲು ಒಡೆದು ದೇವರ ವಿಗ್ರಹಗಳಿಗೆ ಹಾಕಿದ್ದ 2 ಬೆಳ್ಳಿಯ ನಾಗರಹೆಡೆ, ಸುಮಾರು ಒಂದೂವರೆ ಕೆಜಿ ತೂಕದ 3 ಬೆಳ್ಳಿ ಕಿರೀಟ, ಸುಮಾರು 40 ಗ್ರಾಂ ತೂಕದ 3 ಸೆಟ್ ಮಾಂಗಲ್ಯ ಸರ, 2 ಬೆಳ್ಳಿಯ ಲಕ್ಷ್ಮೀ ವಿಗ್ರಹಗಳು ಮತ್ತು  ಡಿವಿಡಿ ಪ್ಲೆಯರ್ ಸೇರಿದಂತೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ದೋಚುವುದರ ಜೊತೆಗೆ ದೇವಾಲಯದಲ್ಲಿದ್ದ ಹುಂಡಿಯನ್ನು ತೆಗೆದುಕೊಂಡು ಹೋಗಿದ್ದಾರೆ. ದೇವಾಲಯದಿಂದ ಸುಮಾರು 500 ಮೀಟರ್ ದೂರದ ಹೊಲದಲ್ಲಿ ಖಾಲಿ ಹುಂಡಿಯನ್ನು ಬಿಸಾಡಿದ್ದಾರೆ.  ದೇವಾಲಯದ ಅರ್ಚಕ ಶ್ರೀನಿವಾಸಾಚಾರಿ ಕಳೆದ ಸೋಮವಾರ ಎಂದಿನಂತೆ ಪೂಜಾ ಸಮಯದ ನಂತರ ರಾತ್ರಿ 9 ಗಂಟೆಗೆ ದೇವಾಲಯದ ಬಾಗಿಲನ್ನು ಭದ್ರಪಡಿಸಿಕೊಂಡು ಹೋಗಿದ್ದರು ಎನ್ನಲಾಗಿದೆ. ಮಂಗಳವಾರ ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಪೂಜೆಗೆಂದು ದೇವಾಲಯಕ್ಕೆ ಆಗಮಿಸಿದಾಗ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಕೂಡಲೇ ಅವರು ದೇವಾಲಯದ ಟ್ರಸ್ಟಿಗಳಿಗೆ ವಿಷಯ ತಿಳಿಸಿದ್ದಾರೆ.ದೇವಾಲಯದ ಸಮಿತಿಯವರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಈ ಸಂಬಂಧ ಟ್ರಸ್ಟಿ ವೆಂಕಟರಾಮರೆಡ್ಡಿ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ವೃತ್ತ ನಿರೀಕ್ಷಕ ಸಿ. ವಸಂತ್ ಮತ್ತು ಪಿಎಸೈ ಮುನಿರೆಡ್ಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನದಳವನ್ನು ಕರೆಸಲಾಗಿತ್ತು. ಬಾಗೇಪಲ್ಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಾಷ್ಟ್ರೀಯ ಪರಿಷತ್‌ಗೆ ಆಯ್ಕೆ
ಟೇಕಲ್: ರಾಷ್ಟ್ರೀಯ ಪರಿಷತ್ ಸದಸ್ಯರಾಗಿ ಮಾಲೂರು ತಾಲೂಕು ಮಾಸ್ತಿ ಹೋಬಳಿಯ ಬಿಟ್ನಹಳ್ಳಿ ಬಿ. ಹನುಮಪ್ಪ ಅವರನ್ನು ನೇಮಿಸಿದ ಹಿನ್ನಲೆಯಲ್ಲಿ ಅವರನ್ನು ತಾಲೂಕು ಬಿಜೆಪಿ ಹಿರಿಯ ಮುಖಂಡರಾದ ಎಂ.ಎಸ್.ದೇವರಾಜರೆಡ್ಡಿ, ಬಿ.ಎನ್.ರಾಜಾರಾಮ್ ಗೂ ಬಿಜೆಪಿ ಮುಖಂಡರು ಅಭಿನಂದಿಸಿದ್ದು, ನೇಮಕ ಮಾಡಿದ ರಾಜ್ಯ ಬಿಜೆಪಿ ನಾಯಕರು ಹಾಗೂ ಜಿಲ್ಲಾ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement