ಕಳಂಕಿತರು ಎಂಬುದಕ್ಕೆ ದಾಖಲೆಗಳಿದ್ದರೆ ನೀಡಲಿ
ಕ.ಪ್ರ.ವಾರ್ತೆ , ಕೋಲಾರ , ಜ.7
ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ಡಿ.ಕೆ. ಶಿವಕುಮಾರ್ ಮತ್ತು ರೋಶನ್ ಬೇಗ್ ಭ್ರಷ್ಟರು, ಕಳಂಕಿತರು ಎಂಬುದಕ್ಕೆ ಸೂಕ್ತ ದಾಖಲೆಗಳು ಇದ್ದಲ್ಲಿ ಅದನ್ನು ಮುಖ್ಯಮಂತ್ರಿಗಳಿಗೆ ನೀಡಲಿ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ್ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಸಲಹೆ ನೀಡಿದರು.
ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನೆಗಾಗಿ ಮಂಗಳವಾರ ನಗರಕ್ಕೆ ಭೇಟಿ ನೀಡಿದ್ದ ಅವರು ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಯಾವುದೇ ಕಳಂಕಿತ ಸಚಿವರು ಇಲ್ಲವೆಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಸಹ ಇದೇ ನಿರ್ಧಾರಕ್ಕೆ ಬಂದಿರುವುದರಿಂದಲೇ ಇವರಿಬ್ಬರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು ಹಿರೇಮಠ್ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಾಖಲೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಲಿ ಎಂದು ತಿಳಿಸಿದರು.
ಮೂಢನಂಬಿಕೆ ನಿಷೇಧ, ಶ್ಯಾದಿ ಭಾಗ್ಯ ಯೋಜನೆಗಳ ವಿಚಾರದಲ್ಲಿ ಸಿದ್ದರಾಮಯ್ಯ ನಿಲುವುಗಳಿಂದ ಪಕ್ಷಕ್ಕೆ ಮುಜುಗರ ಆಗಿಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಸರ್ಕಾರ ಮೂಢ ನಂಬಿಕೆ ನಿಷೇಧಕ್ಕಾಗಿ ಕಾಯಿದೆ ಜಾರಿ ಮಾಡಿಲ್ಲ, ಸಮಾಜದಲ್ಲಿ ಬದಲಾವಣೆ ತರಲು ಕೆಲವರು ಸಲಹೆ ನೀಡಿದ್ದಾರಷ್ಟೆ, 12ನೇ ಶತಮಾನದಲ್ಲೂ ಈ ರೀತಿಯ ಸಲಹೆಗಳನ್ನು ಆಧರಿಸಿಯೇ ಬಸವಣ್ಣನವರು ಕ್ರಾಂತಿಕಾರಿ ನಿಲುವುಗಳನ್ನು ಅನುಭವ ಮಂಟಪದಲ್ಲಿ ಕುಳಿತು ಜಾರಿಗೆ ತಂದರೆಂದು ವಿರೋಧಿಗಳ ಟೀಕೆಗೆ ಪ್ರತ್ಯುತ್ತರ ನೀಡಿದರು.
ಹೈಕಮಾಂಡ್ ಇಷ್ಟ: ಡಾ.ಜಿ. ಪರಮೇಶ್ವರ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದಾರೆ. ಇವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಬಿಡುವುದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಸಚಿವರು ಉತ್ತರಿಸಿದರು.