ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆರೆ ಒತ್ತುವರಿ ತೆರವಿಗೆ ಟಾಸ್ಕ್‌ಫೋರ್ಸ್

Vishwanath S
Updated On : 8 Jan 2014, 1:05 am

ಕ.ಪ್ರ.ವಾರ್ತೆ ,  ಕೋಲಾರ ,  ಜ.7
ಕೆರೆಗಳ ನಾಡು ಎಂದೇ ಪ್ರಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯು ಅಂತರ್ಜಲ ಸಮಸ್ಯೆಯಿಂದ ಪಾರಾಗಬೇಕಾದರೆ ಕೆರೆಗಳ ಒತ್ತುವರಿ ತೆರವು ಅಗತ್ಯವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಅವರು ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನೀರಿನ ಸಮಸ್ಯೆ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡಿದ ಮಾಹಿತಿ ಗಮನಿಸಿದರೆ ಕೆರೆಗಳ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ಎಡವಿರುವಂತೆ ಭಾಸವಾಗುತ್ತಿದೆ ಎಂದು ಸೂಚ್ಯವಾಗಿ ನುಡಿದರು.
ಕಳೆದ ವರ್ಷ ನವೆಂಬರ್ 26 ರಂದು ನಮ್ಮ ಸರ್ಕಾರ ಗ್ರಾಮೀಣಾಭಿವೃದ್ಧಿ ಸಂಬಂಧ 15 ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಕೆರೆಗಳ ಅಭಿವೃದ್ಧಿಯೂ ಒಂದಾಗಿದೆ. ಅಂತರ್ಜಲ ಸಮಸ್ಯೆಗೆ ಮಳೆಯ ಕೊರತೆ ಒಂದು ಕಾರಣವಾದರೆ, ನೀರು ಸಂಗ್ರಹಣೆಯಾಗದ ರೀತಿಯಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಮತ್ತೊಂದು ಪ್ರಮುಖ ಕಾರಣವಾಗಿರುವುದರಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಜನತೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ಕೆರೆಗಳ ಒತ್ತುವರಿ ತೆರವು ಮಾಡಿಸಲು ಸಮರೋಪಾದಿಯಲ್ಲಿ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದರು.
ಕೆರೆಗಳ ಒತ್ತುವರಿ ತೆರವು ಕಾರ್ಯ ಸುಲಭವಲ್ಲ. ಆದರೆ, ಜನಪ್ರತಿನಿಧಿಗಳು ಮನಸ್ಸು ಮಾಡಿದಲ್ಲಿ ಜನತೆಯ ಮನವೊಲಿಸಬಹುದು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನೀರಾವರಿ ಇಲಾಖೆಯ ಅಧಿಕಾರಿಗಳು ಟಾಸ್ಕ್‌ಫೋರ್ಸ್ ರಚನೆ ಮಾಡಿಕೊಂಡು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ಎರಡು ಕೆರೆಗಳ ಒತ್ತುವರಿ ತೆರವು ಮಾಡಿಸಿದರೆ ನೀರಿನ ಸಮಸ್ಯೆ ಕೊಂಚ ಮಟ್ಟಿಗಾದರೂ ನಿವಾರಣೆ ಆಗುತ್ತದೆ ಎಂದು ತಿಳಿಸಿದರು.
ಟಾಸ್ಕ್‌ಫೋರ್ಸ್ ರಚನೆ ಮಾಡುವುದಕ್ಕೆ ಏನಾದರೂ ಸಮಸ್ಯೆಯಿದ್ದಲ್ಲಿ ಅಥವಾ ಸಮಿತಿಯಲ್ಲಿ ಯಾರು ಇರಬೇಕೆಂಬುದರ ಬಗ್ಗೆ ಸಲಹೆ ಬೇಕಾದರೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಅವರೊಂದಿಗೆ ಚರ್ಚಿಸಿ, ಇವರ ಮಾರ್ಗದರ್ಶನದಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡುವಂತೆ ಸೂಚಿಸಿದರು.
ರಾಜ್ಯದಲ್ಲಿ ಸುಮಾರು 12 ಸಾವಿರ ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಗುರಿ ಇಟ್ಟುಕೊಂಡಿದೆ. ಕೋಲಾರದಲ್ಲಿ 855 ಕೆರೆಗಳ ಪೈಕಿ 256 ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವುದು ತೃಪ್ತಿಯಾಗಿಲ್ಲ. ಕೆರೆ ನಾಡು ಎಂದು ಕರೆಯುವ ಕೋಲಾರದಲ್ಲಿ ಈ ರೀತಿ ಆದರೆ ಬೇರೆ ಕಡೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಟದ ಮೈದಾನ:  ಸಾಂಪ್ರದಾಯಿಕ ದೇಸೀ ಕ್ರೀಡೆಗಳನ್ನು ಉಳಿಸಲು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ ಎರಡು ಆಟದ ಮೈದಾನಗಳ ಅವಶ್ಯಕತೆ ಇದೆ. ಹಳ್ಳಿಗಳಲ್ಲಿ ಆಟದ ಮೈದಾನಕ್ಕೆ ಜಾಗ ಗುರುತಿಸಿ ನಿಗದಿತ ವೇಳೆಗೆ ಮೈದಾನ ನಿರ್ಮಿಸುವ ವಿಚಾರದಲ್ಲಿ ತಾತ್ಸಾರ ಬೇಡ, ತಾಲೂಕು ಪಂಚಾಯಿತಿ ಇಒಗಳು ಆಟದ ಮೈದಾನಕ್ಕೆ ಜಾಗ ಗುರುತಿಸಿ ಕೊಡುವುದಕ್ಕೆ ವಿಫಲರಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸುಮಾರು 10 ಸಾವಿರ ಆಟದ ಮೈದಾನಗಳ ಅಭಿವೃದ್ಧಿಗೆ ಸರ್ಕಾರ ಗುರಿ ಹೊಂದಿದೆ, ಈಗಾಗಲೇ 7800 ಮೈದಾನಗಳಿಗೆ ಜಾಗ ಗುರುತಿಸಲಾಗಿದೆ. ಆದರೆ ಕೋಲಾರ ಜಿಲ್ಲೆಯಲ್ಲಿ 928ಕ್ಕೆ ಕೇವಲ 49 ಆಟದ ಮೈದಾನಗಳ ನಿರ್ಮಾಣವಾಗಿರುವುದು ಖುಷಿ ತಂದಿಲ್ಲವೆಂದರು.
ಜ.12ರಂದು ಸ್ವಾಮಿ ವಿವೇಕಾನಂದರ 150ನೇ ಹುಟ್ಟ ಹಬ್ಬದ ಆಚರಣೆ ಹಿನ್ನಲೆಯಲ್ಲಿ ಸರ್ಕಾರ 2200 ಆಟದ ಮೈದಾನಗಳ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲು ಚಾಲನೆ ನೀಡಲು ನಿರ್ಧರಿಸಿದ್ದು ಅದೇ ರೀತಿ ಜಿಲ್ಲೆಯಲ್ಲೂ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 2 ಆಟದ ಮೈದಾನಗಳ ಕಾಮಗಾರಿ ಆರಂಭಕ್ಕೆ ಅಧಿಕಾರಿಗಳು ಮುಂದಾಗಬೇಕೆಂದರು.
ಕೆರೆಗಳ ಒತ್ತುವರಿ ತೆರವು ಕಾರ್ಯಕ್ಕೆ ಟಾಸ್ಕ್‌ಫೋರ್ಸ್ ಹೋದ ಸಂದರ್ಭದಲ್ಲಿ ಆಟದ ಮೈದಾನಕ್ಕೂ ಜಾಗ ಕಲ್ಪಿಸಲು ಅಧಿಕಾರಿಗಳು ಗಮನ ನೀಡಬೇಕು. ಅದೇ ರೀತಿ ಸ್ಮಶಾನ ಅಗತ್ಯ ಭೂಮಿ ಒದಗಿಸಲು ಗಮನ ನೀಡಿದಲ್ಲಿ ಸರ್ಕಾರದ ಉದ್ದೇಶ ಸಾರ್ಥವಾಗುತ್ತದೆ ಎಂದರು.
ಮುಂದಿನ ಮಳೆಗಾಲದ ವೇಳೆಗೆ ಕೆರೆಗಳ ಒತ್ತುವರಿ ತೆರವು ಮಾಡಿಸಬೇಕು, ಶೌಚಾಲಯಗಳ ನಿರ್ಮಾಣದಲ್ಲೂ ಪ್ರಗತಿ ಸಾಧನೆ ಆಗದಿರುವುದು ಗಮನಕ್ಕೆ ಬಂದಿದ್ದು ಎರಡು ತಿಂಗಳಲ್ಲಿ ಗುರಿ ಸಾಧನೆ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ತಾ.ಪಂ ಇಒ ಮತ್ತು ಗ್ರಾಪಂ ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲೆಗೆ ನಿರ್ಮಲ ಭಾರತ ಯೋಜನೆಯಡಿ 58472 ಶೌಚಾಲಯಗಳು ಗುರಿ ನೀಡಲಾಗಿದ್ದು ಈವರೆಗೆ ಕೇವಲ 11218 ಶೌಚಾಲಯಗಳು ಮಾತ್ರ ನಿರ್ಮಾಣವಾಗಿದೆ. ಶೇ.20 ಪ್ರಗತಿ ಸಾಧನೆ ತಮಗೆ ತೃಪ್ತಿ ತಂದಿಲ್ಲವೆಂದರು.
ಶುದ್ಧ ಕುಡಿಯುವ ನೀರು:  ಅಂತರ್ಜಲ ಸಮಸ್ಯೆಯಿಂದ ಜಿಲ್ಲೆಯಲ್ಲಿ ಲವಣಾಂಶ ಹೆಚ್ಚಿರುವ ನೀರು ಕುಡಿಯುವಂತಾಗಿದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ, ಕುಡಿಯುವ ನೀರಿನ ಗುಣಭಾದೀತ ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಆರ್.ಓ ಘಟಕಗಳನ್ನು ಅಳವಡಿಸಲು ಜಿ.ಪಂ ಇಂಜನಿಯರಿಂಗಗ್ವಿಭಾಗ ಹಾಗೂ ಕೆ.ಆರ್.ಐ.ಡಿ.ಎಲ್ ವತಿಯಿಂದ ಹಾಗೂ ಕೆನರಾ ಬ್ಯಾಂಕಿನ ಸಹಯೋಜಿತ ಕಾರ್ಯಕ್ರಮದಡಿ 349 ಘಟಕಗಳ ಗುರಿ ಹೊಂದಿತ್ತಾದರೂ ಈವರೆಗೆ ಕೇವಲ 36 ಘಟಕಗಳು ಸ್ಥಾಪನೆ ಆಗಿದೆ ಎಂದು ಸಚಿವರು ಕಿಡಿಕಾರಿದರು.
ಜಿಪಂ ಇಂಜನಿಯರಿಂಗ್ ವಿಭಾಗಕ್ಕೆ 70 ಗುರಿ ನೀಡಿದ್ದು 36 ಸಾಧನೆ ಆಗಿದೆ, ಕೆಆರ್‌ಐಡಿಎಲ್‌ಗೆ 71ರ ಪೈಕಿ ಕೇವಲ 2 ಸಾಧನೆ ಆಗಿದೆ, ಕೆನರಾ ಬ್ಯಾಂಕಿನ 208 ಗುರಿಯ ಪೈಕಿ ಯಾವುದೇ ಸಾಧನೆ ಆಗಿಲ್ಲವೆಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಫೆಬ್ರವರಿ 15ರೊಳಗೆ ಶುದ್ಧ ನೀರು ಕುಡಿಯುವ ಘಟಕಗಳ ಸ್ಥಾಪನೆ ಆಗಬೇಕು, ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಶಾಸಕರಾದ ಬಂಗಾರಪೇಟೆ ಕ್ಷೇತ್ರದ ಎಸ್.ಎನ್. ನಾರಾಯಣಸ್ವಾಮಿ, ಮುಳಬಾಗಿಲು ಕೊತ್ತೂರು ಮಂಜುನಾಥ್, ಕೆಜಿಎಫ್‌ನ ರಾಮಕ್ಕ ಹಾಗೂ ಮಾಲೂರಿನ ಮಂಜುನಾಥಗೌಡ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಅಲುವೇಲಮ್ಮ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಎಸ್. ಆನಂದ್, ನಾಗರಾಜು, ಸಿಮೋಲ್ ಮೋಹನ್, ಜಿ.ಪಂ ಸದಸ್ಯರಾದ ಅಮರನಾಥ್, ಚೌಡೇಶ್ವರಿ, ಅ.ಮು. ಲಕ್ಷ್ಮೀನಾರಾಯಣ, ಯಲ್ಲಮ್ಮ, ರಾಮಸ್ವಾಮಿರೆಡ್ಡಿ, ನಾರಾಯಣರೆಡ್ಡಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯಬಾಸ್ಕರ್, ಜಿಲ್ಲಾಧಿಕಾರಿ ಡಿ.ಕೆ.ರವಿ, ಜಿಪಂ ಸಿಇಒ ಝಲ್ಪಿಖಾರ್ ಉಲ್ಲಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಹಿರೇಮಠ್ ಭೇಟಿ ರೈತರ ಸಮಸ್ಯೆಗೆ ಸಂಬಂಧಿಸಿದ್ದು; ಸಚಿವರ ಸ್ಪಷ್ಟನೆ
ಕ.ಪ್ರ.ವಾರ್ತೆ ,  ಕೋಲಾರ ,  ಜ.7

ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ್ ತಮ್ಮನ್ನು ಭೇಟಿಯಾಗಿದ್ದು ಸುಂಡೂರು ರೈತರ ಸಮಸ್ಯೆ ನಿವಾರಣೆಗಾಗಿಯೇ ಹೊರತು ಬೇರೆ ಯಾವುದೇ ಉದ್ದೇಶದಿಂದಲ್ಲವೆಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಅವರು ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ಸುಂಡೂರಿನಲ್ಲಿ ಎನ್.ಎಂ.ಬಿ.ಸಿ ಎಂಬ ಕಂಪನಿಯು ರೈತರ ಹೊಲ ಗದ್ದೆಗಳಿಗೆ ಕಾರ್ಖಾನೆಯ ತ್ಯಾಜ್ಯವನ್ನು ಹರಿಸಿ ನಷ್ಟ ಉಂಟು ಮಾಡಿದ್ದು ಈ ಸಂಬಂಧ ತಮ್ಮೊಂದಿಗೆ ಚರ್ಚಿಸಿ ರೈತರಿಗೆ ಪರಿಹಾರ ಕೊಡಿಸುವಂತೆ ಕೇಳಲು ಬಂದಿದ್ದರು. ಈ ಸಂದರ್ಭದಲ್ಲಿ ಸುಂಡೂರಿನ ರಾಘವೇಂದ್ರ ಕುಷ್ಟಗಿ ಹಾಗೂ ಆ ಭಾಗದ ರೈತ ಮುಖಂಡರಿದ್ದರೆಂದು ತಿಳಿಸಿದರು.
ಕಾರ್ಖಾನೆಯಿಂದ ಹೊರ ಹರಿಯುವ ತ್ಯಾಜ್ಯದಿಂದ ರೈತರು ನಷ್ಟ ಅನುಭವಿಸಿದ್ದಾರೆ. ಕಂಪನಿಯ ಮಾಲೀಕ 1.74 ಕೋಟಿ ಪರಿಹಾರ ನೀಡುವುದಾಗಿ ಹೇಳಿ ಮಾತು ತಪ್ಪಿಸಿ ಕಡಿಮೆ ಪರಿಹಾರ ನೀಡುವುದಾಗಿ ಹೇಳಿದ್ದಾರೆ.
ಇದರಿಂದಾಗಿ ತಾವು ಮಧ್ಯ ಪ್ರವೇಶ ಮಾಡಿ ರೈತರಿಗೆ ನ್ಯಾಯ ಕಲ್ಪಿಸಬೇಕೆಂದು ಹಿರೇಮಠ್, ರಾಘವೇಂದ್ರ ಕುಷ್ಟಗಿ ಹಾಗೂ ರೈತ ಮುಖಂಡರು ಕೋರಿದ್ದು ಈ ಕುರಿತು ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದೇನೆಯೇ ಹೊರತು ಹಿರೇಮಠ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲವೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement