ದಲಿತ ಮುಖಂಡರಪ್ರತಿಭಟನೆ: ತಾಪಂ ಉಪಾಧ್ಯಕ್ಷರ ಆಕ್ಷೇಪ
ಗುಡಿಬಂಡೆ: ಸೋಮವಾರ ಪಟ್ಟಣದ ತಾಲೂಕು ಕಚೇರಿ ಎದುರು ದಸಂಸ ಮುಖಂಡರು ನಡೆಸಿದ ಸಾಂಕೇತಿಕ ಧರಣಿ ದುರುದ್ದೇಶದಿಂದ ಕೂಡಿದ್ದು, ಪ್ರತಿಭಟನೆಗೆ ಅರ್ತವೇ ಇಲ್ಲ ಎಂದು ತಾಪಂ ಉಪಾಧ್ಯಕ್ಷ ಆದಿನಾರಾಯಣರೆಡ್ಡಿ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದಲಿತ ಸಮುದಾಯದ ಮುಖಂಡರೆಂದು ಹೇಳಿಕೊಳ್ಳುವ ಸಂಘಟನೆಯ ಹಲವು ಸ್ವಯಂ ಘೋಷಿತ ನಾಯಕರು ಕೆಲ ತಾಪಂ ಸದಸ್ಯರು ಮತ್ತು ಸಂಘ ಸಂಸ್ಥೆಗಳ ಮುಖಂಡರ ವಿರುದ್ದ ಆಧಾರ ರಹಿತ ಆರೋಪ ಮಾಡಿ ಧರಣಿ ನಡೆಸಿದ್ದಾರೆ. ತಾಲೂಕಿನಲ್ಲಿ ಸಿಇಒ ಇಂದ್ರೇಶ್, ತಮ್ಮ ಅಧಿಕಾರಾವಧಿಯಲ್ಲಿ ಹಲವು ಅಕ್ರಮ ಮಾಡಿ ಹಣ ದುರುಪಯೋಗ ಮಾಡಿದ್ದು, ಇಂತಹ ಅಧಿಕಾರಿ ಕೇವಲ ತಮ್ಮ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕೆ ದಲಿತ ಮುಖಂಡರು ಇವರ ಬೆಂಬಲಕ್ಕೆ ನಿಂತಿರುವ ಉದ್ದೇಶವಾದರೂ ಏನು ಸೋಮೇನಹಳ್ಳಿ ಗ್ರಾಪಂನಲ್ಲಿ ಜೀತದಾಳುಗಳ ಪುನರ್ವಸತಿಗಾಗಿ ವೆಚ್ಚ ಮಾಡಬೇಕಾಗಿದ್ದ ಸುಮಾರು ರು. 5 ಲಕ್ಷ 20 ಸಾವಿರ ಕಾರ್ಯದರ್ಶಿ ಹಾಗೂ ಅಧಿಕಾರಿ ಸೇರಿ ಗುಳುಂ ಮಾಡಿದ್ದಾರೆ. ಇದಲ್ಲದೆ ಇದೇ ಪಂಚಾಯತಿಯಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಪಟ್ಟಂತೆ ಸುಮಾರು ರು. 78 ಲಕ್ಷ ದುರುಪಯೋಗವಾಗಿದೆ. ಈ ಅಕ್ರಮಗಳ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ತಾಪಂ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದಾಗ ಕಾರ್ಯದರ್ಶಿಯನ್ನು ಅಮಾನತ್ತು ಗೊಳಿಸಲಾಗಿದೆ. ಅಧಿಕಾರಿ ಇಂದ್ರೇಶ ರಜೆ ಮೇಲೆ ತೆರಳಿದ್ದಾರೆ. ಇಷ್ಟೆ ಅಲ್ಲದೇ ಗ್ರಾಪಂ ಕಚೇರಿಗೆ ಬೆಂಕಿ ಬಿದ್ದು ಅಮೂಲ್ಯ ಕಡತಗಳು ನಾಶವಾಗಿವೆ. ಇವೆಲ್ಲಾ ಪ್ರಕರಣಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು ತಾವು ಸೇರಿ ಪಂಚಾಯತಿಯ ಹಲವರು ಸದಸ್ಯರು ಮೇಲಾಧಿಕಾರಿಗಳನ್ನು ಒತ್ತಾಯಿಸಿದ್ದೇವೆ. ಇದನ್ನು ಸಹಿಸದ ಕೆಲವರು ನಮ್ಮಗಳ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಧಿಕಾರಿ ತಪ್ಪಿನಿಂದಾಗಿ ಜನಪ್ರತಿನಿಧಿಗಳಾದ ನಮಗೆ ನೋವುಂಟಾಗಿದೆ ಎಂದು ಅವರು ಹೇಳಿದ್ದಾರೆ.
ಆರ್ಟಿಇ ದಾಖಲು ಪ್ರಾರಂಭ: ಬ
ಗುಡಿಬಂಡೆ: ಪೂರ್ವ ಪ್ರಾಥಮಿಕ ಹಾಗೂ 1ನೇ ತರಗತಿಗೆ ತಾಲೂಕಿನ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳುವ ಕಾರ್ಯ ಪ್ರಾರಂಭವಾಗಿದ್ದು, ಈಗಾಗಲೇ ಶಾಲೆಗಳಲ್ಲಿ ಅರ್ಜಿಗಳನ್ನು ವಿತರಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಸಿ.ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಲಾವಾರು ಲಭ್ಯವಿರುವ 1ನೇ ತರಗತಿ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳ ಸೀಟುಗಳ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಥವಾ ಶಾಲೆಯಲ್ಲಿ ಸಂಪರ್ಕಿಸಬಹುದಾಗಿದೆ. ಪೋಷಕರು ಅರ್ಹ ದಾಖಲೆಗಳೊಂದಿಗೆ ಫೆಬ್ರವರಿ ತಿಂಗಳ 8ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕ್ರಿಕೆಟ್ ಬೆಟ್ಟಿಗ್ ದಂಧೆ: ವ್ಯಕ್ತಿ ಬಂಧನ
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ಪೊಲೀಸರು ಬೆಟ್ಟಿಂಗ್ ಹಣದ ಸಮೇತ ಬಂಧಿಸಿದ್ದಾರೆ. ಪಟ್ಟಣದ ಮತಿಘಟ್ಟ ಗೇಟ್ಬಳಿ ರಾಘವೇಂದ್ರ ಕಾಂಡಿಮೆಂಟ್ಸ್ ಮಾಲೀಕರಾದ ಗುರುಮೂರ್ತಿ ಎಂಬುವವನನ್ನು ಬಂಧಿಸಿರುವ ಪೊಲೀಸರು, ಆತನಿಂದ ಬೆಟ್ಟಿಂಗ್ನಲ್ಲಿ ತೊಡಗಿಸಿದ್ದ 40ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಗುರುಮೂರ್ತಿಯ ಮೇಲೆ ವೃತ್ತನಿರೀಕ್ಷಕ ಜಯಕುಮಾರ್ ಮಾರ್ಗದರ್ಶನದಂತೆ ಪಿಎಸ್ಐ ಎಸ್.ಮುನಿರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲಿಕೋತ್ಸವ
ಗುಡಿಬಂಡೆ: ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.9 ರಂದು 2013-14ನೇ ಸಾಲಿನ ಬ್ಲಾಕ್ ಹಂತದ ಕಲಿಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಸಿ.ರವಿಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಕ್ಲಸ್ಟರ್ ಹಂತದಲ್ಲಿ ಪ್ರಥಮ ಸ್ಥಾನ ಪಡೆದ 1 ರಿಂದ 8ನೇ ತರಗತಿವರೆಗಿನ ಸರ್ಕಾರಿ ಕಿರಿಯ, ಹಿರಿಯ ಮತ್ತು ಪ್ರೌಢ ಶಾಲಾ ಮಕ್ಕಳು ಹಾಗೂ ಜನಪ್ರತಿನಿಧಿಗಳು, ಪೋಷಕರು, ಎಸ್ಡಿಎಂಸಿ ಸಮಿತಿ ಪದಾಧಿಕಾರಿಗಳು ಭಾಗವಹಿಸಬೇಕೆಂದು ಕೋರಿದ್ದಾರೆ.
ಉರ್ದು ಮಕ್ಕಳಿಗೆ ಕ್ಯಾಲೆಂಡರ್ ವಿತರಣೆ
ಮುಳಬಾಗಲು: ಉರ್ದು ಭಾಷೆಯ ಮಕ್ಕಳ ಅನುಕೂಲಕ್ಕಾಗಿ ಕ್ಯಾಲೆಂಡರ್ ವಿತರಿಸಲಾಗುತ್ತಿದ್ದು, ಮಕ್ಕಳು ಇದರ ಮನನ ಮಾಡಲು ರೋಷನ್ ಸಂಸ್ಧೆಯ ಅಧ್ಯಕ್ಷ ಜಬೀದುಲ್ಲಾ ಹೇಳಿದರು.ಪಟ್ಟಣದ ಬಂಗ್ಲಾ ಉರ್ದು ಸರ್ಕಾರಿ ಶಾಲೆಯಲ್ಲಿ ಉರ್ದು ಮಕ್ಕಳ ಅನುಕೂಲಕ್ಕಾಗಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ಇತ್ತೀಚಿನ ದಿವಸಗಳಲ್ಲಿ ಇಂಗ್ಲಿಷ್ ಭಾಷೆಯ ಪ್ರಭಾವ ಎಲ್ಲಾ ಭಾಷೆ ಹಾಗೂ ಜನಾಂಗದ ಮೇಲೆ ಇದ್ದು, ಮಾತೃಭಾಷೆಗಳಲ್ಲಿ ಕಲಿಯುವರ ಸಂಖ್ಯೆ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇಂಗ್ಲಿಷ್ ಪ್ರಭಾವ ಉರ್ದು, ಕನ್ನಡ ಮುಂತಾದ ಎಲ್ಲಾ ಭಾಷೆಗಳ ಮೇಲೆ ಬೀಳುತ್ತಿದ್ದು, ಆಯಾ ಭಾಷಿಗರು ತಮ್ಮ ಭಾಷೆಯ ಉಳಿವಿಗೆ ಶ್ರಮಿಸಬೇಕು ಎಂದು ಕೋರಿದರು.
ಪುರಸಭೆ ಸದಸ್ಯರಾದ ನಯಾಜ್, ಅಕ್ಮಲ್ ಬೇಗ್, ವಕೀಲ ಕೊಲದೇವಿ ರಿಯಾಜ್,ಇಮ್ರಾನ್ ಖಾನ್, ಮೌಲ್ವಿಗಳಾದ ಖಲೀಲ್, ರಗಿಯ ಅಲಂ ಮುಂತಾದವರು ಭಾಗವಹಿಸಿದ್ದರು.
ಜನಗಣತಿ; ತಿದ್ದುಪಡಿಗೆ ಅವಕಾಶ
ಮುಳಬಾಗಲು: ಪಟ್ಟಣದಲ್ಲಿ 2011ರಲ್ಲಿ ನಡೆದ ಜನಗಣತಿಯಲ್ಲಿ ತಿದ್ದುಪಡಿಗಳನ್ನು ಕೋರಿ ಅಸಕ್ತರಿಗೆ ಅವಕಾಶ ನೀಡಲಾಗಿದೆ ಎಂದು ಪುರಸಭೆ ಕಂದಾಯ ನಿರೀಕ್ಷಕ ಪ್ರಸನ್ನ ಕುಮಾರ್ ನುಡಿದರು.
ಮುಳಬಾಗಲು ಪುರಸಭೆ ಕಚೇರಿಯ ಅವರಣದಲ್ಲಿ ಮಂಗಳವಾರ ಜನಗಣತಿಗಳಿಗೆ ತಿದ್ದುಪಡಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುರಸಭೆ ಸದಸ್ಯರಾದ ಸೈಯದ್ ನಯಾಜ್, ಬೂಸಲಕುಂಟೆ ಶಂಕರಪ್ಪ, ಡಿಶ್ ಮಂಜು, ಪುರಸಭೆ ಅಧಿಕಾರಿಗಳಾದ ಶೋಭನ್ ಬಾಬು ಮುಂತಾದವರು ಭಾಗವಹಿಸಿದ್ದರು.
ಖಜಾನೆ ಇಲಾಖೆಗೆ ಇಲ್ಲ ಸ್ವಂತ ಕಟ್ಟಡ ಭಾಗ್ಯ
ಗುಡಿಬಂಡೆ: ಅನ್ನಭಾಗ್ಯ, ಶಾದಿಭಾಗ್ಯ, ಆರೋಗ್ಯಭಾಗ್ಯ ಮುಂತಾದ ಯೋಜನೆಗಳ ಭಾಗ್ಯಗಳನ್ನು ಘೋಷಿಸಿ ಜಾರಿಗೆ ತರುತ್ತಿರುವ ಸರ್ಕಾರ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಜಾನೆ ಇಲಾಖೆ ಕಚೇರಿಗೆ ಮಾತ್ರ ಸ್ವಂತ ಕಟ್ಟಡದಲ್ಲಿ ಕೆಲಸ ಮಾಡುವ ಭಾಗ್ಯ ಒದಗಿಸುವಲ್ಲಿ ವಿಫಲವಾಗಿದೆ.
ಪಟ್ಟಣದ ಮಿನಿ ವಿಧಾನಸೌದದ ಮಹಡಿಯ ಮೇಲೆ ಖಜಾನೆ ಇಲಾಖೆಗೆಂದೇ ಸುಸಜ್ಜಿತ ಕಟ್ಟಡ ಮೀಸಲಾಗಿದೆ. ಆದರೆ ವಿದ್ಯುತ್ ಸಂಪರ್ಕ, ಕಟ್ಟಡದ ಒಳಭಾಗದ ರಚನೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಕೆಲಸಗಳು ಆಗದೇ ಇರುವ ಕಾರಣ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ನೂತನ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪ್ರಕ್ರಿಯೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಉದ್ಬವಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಕಾರಣವೇನೆ ಇರಲಿ ಸರ್ಕಾರಿ ಇಲಾಖೆಗಳಲ್ಲಿ ಅತಿ ಮುಖ್ಯವಾದ ಇಲಾಖೆಯೆಂದೇ ಗುರ್ತಿಸಲ್ಪಡುವ ಖಜಾನೆ ಇಲಾಖೆ ಕಚೇರಿ ಸೂಸೂತ್ರವಾಗಿ ಸಾರ್ವಜನಿಕ ಸೇವೆ ಒದಗಿಸಲು ಸಂಬಂಧಪಟ್ಟವರು ಗಮನಹರಿಸಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಹೊಲದಲ್ಲಿ ಅಪರಿಚಿತ ಶವ ಪತ್ತೆ
ಚಿಂತಾಮಣಿ: ಅನುಮಾನಾಸ್ಪದವಾಗಿ ಅಪರಿಚಿತ ಶವವೊಂದು ಹೊಲದಲ್ಲಿ ಕಂಡು ಬಂದಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವೈಜಕೂರು ಗ್ರಾಮದ ಹೊರ ವಲಯದಲ್ಲಿ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ. ತಾಲೂಕಿನ ಬೆಂಗಳೂರು ರಸ್ತೆಯ ವೈಜಕೂರು ಗ್ರಾಮದ ಹೊರವಲಯದ ತೋಟವೊಂದರಲ್ಲಿ ಸುಮಾರು 50 ವರ್ಷದ ಪುರುಷ ವೃದ್ಧನ ಶವ ಅನುಮಾನಾಸ್ಪದ ರೀತಿಯಲ್ಲಿ ಮಲಗಿ ಸಾವನ್ನಪ್ಪಿರುವ ಬಗ್ಗೆ ದನ ಕಾಯುವ ಹಲವು ಹುಡುಕರು ಕಂಡು ತಕ್ಷಣ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಕೂಡಲೇ ಗ್ರಾಮಾಂತರ ಠಾಣೆಯ ಪೋಲೀಸರು ಸ್ಥಳಕ್ಕೆ ದಾವಿಸಿ ಸ್ಥಳ ಪರಿಶೀಲಿಸಿ ನಂತರ ಶವವನ್ನು ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಚಿಂತಾಮಣಿ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬನು ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ನಗರದಲ್ಲಿ ನಡೆದಿದೆ. ನಗರದ ಗಣೇಶ ನಗರ ನಿವಾಸಿ ರಮೇಶ್ ರೆಡ್ಡಿ(38) ಎಂಬಾತ ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ಮನೆ ಮುಂದೆ ಯಾರೂ ಇಲ್ಲದ ಸಂದರ್ಭದಲ್ಲಿ ವಿಷ ಸೇವಿಸಿ ಸಾವು-ಬದುಕಿನ ಜೊತೆ ಹೋರಾಟ ನಡೆಸುತ್ತಿದ್ದ ಈತನನ್ನು ತಕ್ಷಣ ನೆರೆಹೊರೆಯವರು ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಮರಳು ದಂಧೆ: 5 ಟ್ರ್ಯಾಕ್ಟರ್ಗಳ ವಶ
ಚಿಂತಾಮಣಿ: ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಮರಳು ತುಂಬಿದ ಟ್ರ್ಯಾಕ್ಟರ್ಗಳ ಮೇಲೆ ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಶ್ಮೂರ್ತಿ ಹಾಗೂ ಸಿಬ್ಬಂದಿ ದಾಳಿ ನಡೆಸಿ 5 ಮರಳು ತುಂಬಿದ ಟ್ರ್ಯಾಕ್ಟರ್ನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಸಿದ್ದೇಪಲ್ಲಿ ಕ್ರಾಸ್, ವಾಲ್ಮೀಕಿ ವೃತ್ತ, ಚೇಳೂರು ರಸ್ತೆ ಮುಂತಾದ ಸ್ಥಳಗಳಲ್ಲಿ ರಾಜಾರೋಷವಾಗಿ ಮರಳು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ಗಳನ್ನು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಶ್ಮೂರ್ತಿಹಾಗೂ ಸಿಬ್ಬಂದಿ ದಾಳಿ ನಡೆಸಿ 5 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳ ವಶಕ್ಕೆ ನೀಡಲಾಗಿದೆಯೆಂದು ತಿಳಿದು ಬಂದಿದೆ.