ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಂಗಾರಪೇಟೆ; ನೀರಿಗೆ ಖಾಸಗಿ ಟ್ಯಾಂಕರ್ ಮೊರೆ

Vishwanath S
Updated On : 8 Jan 2014, 1:06 am

ಬಂಗಾರಪೇಟೆ: ಬರದಲ್ಲಿಯೂ ಪಟ್ಟಣವನ್ನು ಹೊರತು ಪಡಿಸಿ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಅಷ್ಟಾಗಿ ಹಾಹಾಕಾರ ಇಲ್ಲದಿರುವುದು ತಾಲೂಕು ಆಡಳಿತಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಸ್ವಲ್ಪ ನೆಮ್ಮದಿಯಾಗಿ ಉಸಿರಾಡುವಂತಾಗಿದೆ.
ಕಳೆದ 8 ವರ್ಷಗಳಿಂದ ಕ್ಷೇತ್ರವನ್ನು ಸತತವಾಗಿ ಬರ ಆವರಿಸಿ ರೈತಾಪಿ, ವರ್ತಕರು, ಶಾಲಾ ಮಕ್ಕಳನ್ನು ಹಾಗೂ ಹೊಟೇಲ್ ಉದ್ಯಮಿಗಳನ್ನು ಕಂಗೆಡಿಸಿತ್ತು. ನೀರಿನ ಸಮಸ್ಯೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಕ್ಷೇತ್ರವನ್ನೇ ಬಿಟ್ಟು ಬೇರೆ ನಗರಗಳಿಗೆ ಹೋಗುವಷ್ಟು ಇತ್ತು. ಕೆಲ ಅಧಿಕಾರಿಗಳು ಬಂಗಾರಪೇಟೆ ಕ್ಷೇತ್ರಕ್ಕೆ ವರ್ಗಾವಣೆ ಎಂದರೆ ಹೆದರುವಂತಾಗಿತ್ತು.
ಇನ್ನೂ ಕೆಲವರು ಮನೆಗಳನ್ನು ಮಾರಾಟ ಮಾಡಿಕೊಂಡು ಬೆಂಗಳೂರು ನಗರವನ್ನು ಸೇರಿದ್ದರು. ಇಷ್ಟಾದರೂ ಪಟ್ಟಣದಲ್ಲಿ ಸೈಟ್‌ಗಳ ಬೆಲೆಯಲ್ಲಿ ಮಾತ್ರ ಏನು ಕಡಿಮೆಯಾಗಿಲ್ಲ. ಸಾಮಾನ್ಯ ಜನರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ಕೊಳ್ಳಲು ಆಗದಷ್ಟು ಗಗನಕ್ಕೇರಿದೆ.
ಕಳೆದ ಆರು ತಿಂಗಳವರೆಗೂ ಕ್ಷೇತ್ರದಲ್ಲಿ ಬರೀ ಕುಡಿಯುವ ನೀರಿನದ್ದೇ ಚರ್ಚೆಯಾಗಿತ್ತು. ಶಾಸಕರಾಗುವ ಮುನ್ನ ಎಸ್.ಎನ್. ನಾರಾಯಣಸ್ವಾಮಿ ತಮ್ಮ ಎಸ್.ಎನ್. ಟ್ರಸ್ಟ್ ಮುಖಾಂತರ ಸುಮಾರು 100ಕ್ಕೂ ಹೆಚ್ಚಿನ ಟ್ಯಾಂಕರ್‌ಗಳ ಮೂಲಕ ಕ್ಷೇತ್ರದ ಯಾವುದೇ ಹಳ್ಳಿಯಿಂದ ದೂರವಾಣಿ ಮಾಡಿದರೆ ತಕ್ಷಣ ನೀರು ಪೂರೈಕೆ ಮಾಡುತ್ತಿದ್ದರು. ಇದರಿಂದ ಸ್ವಲ್ಪ ಸಮಸ್ಯೆ ನೀಗಿತ್ತಾದರು ಸಂಪೂರ್ಣವಾಗಿರಲಿಲ್ಲ. ಅಂತರ್ಜಲ ಅಧಿಕ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ಸರ್ಕಾರ ಎಷ್ಟೇ ಪ್ರಮಾಣದಲ್ಲಿ ಹೊಸ ಬೋರ್ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ.
ನಾಲ್ಕು ಗ್ರಾಮಗಳಲ್ಲಿ ಮಾತ್ರ ಸಮಸ್ಯೆ ಇದ್ದು ಅದೂ ತಿಂಗಳಲ್ಲಿ ನೀಗಲಿದೆ ಎಂದು ಇಒ ಕೆ.ಎಸ್. ಭಟ್ ತಿಳಿಸಿದ್ದಾರೆ. ಆದರೆ ಪಟ್ಟಣ ಪ್ರದೇಶದಲ್ಲಿ ಮಾತ್ರ ಅದು ಸಾಧ್ಯವಾಗಿಲ್ಲ. ಈಗಲೂ ನಾಲ್ಕು ತಿಂಗಳಿಗೊಮ್ಮೆ ಮಾತ್ರ ಪಟ್ಟಣದ ಕೆಲ ವಾರ್ಡುಗಳಲ್ಲಿ ಕುಡಿಯುವ ನೀರು ಪುರಸಭೆ ಪೂರೈಕೆ ಮಾಡುತ್ತಿದೆ. ನಾಗರಿಕರು ಖಾಸಗಿ ಟ್ಯಾಂಕರ್‌ಗಳನ್ನು ಮೊರೆ ಹೋಗಿದ್ದಾರೆ. ಪಟ್ಟಣ ಸಮಸ್ಯೆ ನೀಗಿಸಲು ಶಾಸಕರು ಅತ್ತಿಗಿರಿ ಕೊಪ್ಪದ ಕೆರೆಯಲ್ಲಿ 20 ಕೊಳವೆಬಾವಿ ಕೊರೆಸಲು ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement