ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತೃತೀಯ ರಂಗದ ಬಗ್ಗೆ ಶೀಘ್ರವೇ ನಿರ್ಧಾರ

Vishwanath S
Updated On : 9 Jan 2014, 1:24 am

ಚಿಕ್ಕಬಳ್ಳಾಪುರ: ಇನ್ನೂ ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಪ್ರಮುಖರನ್ನೊಳಗೊಂಡ ಸಭೆಯನ್ನು ಕರೆದು ತೃತೀಯ ರಂಗ ರಚನೆ ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗ ಪ್ರಮುಖ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ತೃತೀಯ ರಂಗ ರಚನೆಗೆ ಬೆಂಗಳೂರಿನಿಂದಲೇ ಚಾಲನೆ ಸಿಗಲಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಕೆಲವೇ ದಿನಗಳಲ್ಲಿ ನಡೆಯುವ ಸಭೆಯಲ್ಲಿ ಸುಮಾರು ಐದಕ್ಕೂ ಹೆಚ್ಚು ಮುಖ್ಯಮಂತ್ರಿಗಳು, ರಾಷ್ಟ್ರೀಯ ನಾಯಕರು ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಆ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ವ್ಯಂಗ್ಯ: ಈ ಭಾಗದ ಪ್ರಮುಖ ಸಮಸ್ಯೆಯಾದ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡು, ಇಲ್ಲಿನ ಜನರ ದಿಕ್ಕು ತಪ್ಪಿಸುತ್ತಿರುವ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿಗೆ ಸುಳ್ಳು ಹೇಳುವುದಕ್ಕೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ನೀಡಬೇಕೆಂದು ವ್ಯಂಗ್ಯವಾಡಿದರು.
ದಿಕ್ಕು ತಪ್ಪಿಸಬಾರದು: ಎತ್ತಿನಹೊಳೆ ಯೋಜನೆಯ ಮೂಲಕ 24 ಟಿಎಂಸಿ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವವಾಗಿ ಅಷ್ಟು ನೀರು ಸಿಗುವುದಿಲ್ಲ. ಅಲ್ಲದೇ ಈ ವಿಷಯದಲ್ಲಿ ಅನೇಕ ಗೊಂದಲಗಳು ಜನರನ್ನು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಯ ಕುರಿತು ಬಹಿರಂಗ ಚರ್ಚೆಯಾಗಬೇಕು. ಆ ನಂತರ ಒಮ್ಮತದ ನಿರ್ಧಾರವನ್ನು ಕೈಗೊಂಡು ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಬೇಕೇ ಹೊರತು ತರಾತುರಿಯಲ್ಲಿ ಯಾರೇ ಆಗಲಿ ತಮ್ಮ ಲಾಭಕ್ಕಾಗಿ ಜನರ ದಿಕ್ಕು ತಪ್ಪಿಸಬಾರದೆಂದರು.
ದ್ವಂದ್ವ ನೀತಿ: ಈ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸುವ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿವೆ. ಮಾಜಿ ಮುಖ್ಯಮಂತ್ರಿ ಸದಾನಂದಗೌಡ ದೇವನಹಳ್ಳಿಗೆ ಬಂದು ಎತ್ತಿನಹೊಳೆ ಯೋಜನೆಯ ಮೂಲಕ 24 ಟಿಎಂಸಿ ನೀರನ್ನು ಕೊಡುತ್ತೇವೆ ಎಂದು ಹೇಳಿ, ಮತ್ತೊಂದೆಡೆ ವಿಧಾನ ಪರಿಷತ್ತಿನಲ್ಲಿ ಕರಾವಳಿ ಭಾಗದ ಜನರಿಗೆ ವಿರುದ್ಧವಾಗಿ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಅಲ್ಲೊಂದು ಮಾತು, ಇಲ್ಲೊಂದು ಮಾತು ಹೇಳುವ ಮೂಲಕ ಅವರೂ ಸಹ ಎರಡು ಕಡೆಯ ಜನರನ್ನು ವಂಚಿಸುತ್ತಿದ್ದಾರೆ. ಇನ್ನು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಸಹ ಮಂಗಳೂರು ಕಡೆ ನೀರಾವರಿ ಯೋಜನೆಯ ಬಗ್ಗೆ ಮಾತನಾಡುವುದೇ ಇಲ್ಲ. ಇಲ್ಲಿ ಬಂದು ಜನರಿಗೆ ಭರವಸೆಗಳ ಮೇಲೆ ಭರವಸೆ ಕೊಡುತ್ತಾರೆ ಎಂದು ತಿಳಿಸಿದರು.
ಅಡ್ಡಿ ದೂರ ಮಾಡಬೇಕು: ಬಯಲು ಸೀಮೆಯ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸದ ಹೊರತು ಉಳಿಗಾಲವಿಲ್ಲ. ಇದರಿಂದ ಕಳೆದ ಅನೇಕ ದಶಕಗಳಿಂದ ಜನರು ಪಕ್ಷಾತೀತ, ಜಾತ್ಯಾತೀತವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಬೆಂಬಲ ನೀಡಬೇಕು.ಆದರೆ, ಹೇಳಿಕೆಗಳನ್ನು ಕೊಟ್ಟು ಹೋರಾಟದ ದಿಕ್ಕು ತಪ್ಪಿಸುವುದಲ್ಲ ಎಂದ ಅವರು, ಕೂಡಲೇ ಸರ್ಕಾರ ನೀರಾವರಿ ಯೋಜನೆ ಜಾರಿ ವಿಷಯದಲ್ಲಿ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಬೇಕ ಎಂದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್, ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡ, ಶ್ರೀನಿವಾಸಗೌಡ, ಮುಖಂಡರಾದ ಮುನಿರಾಜು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement