ಬಂಗಾರಪೇಟೆಯಲ್ಲಿ ಆಟೋ ಗ್ಯಾಸ್ ಬಂಕ್ ತೆರೆಯಲು ಒತ್ತಾಯಿಸಿ ಪ್ರತಿಭಟನೆ
ಕೋಲಾರ: ಬಂಗಾರಪೇಟೆಯಲ್ಲಿ ಆಟೋ ಗ್ಯಾಸ್ ಬಂಕ್ ಆರಂಭಿಸಬೇಕು ಮತ್ತು ಗ್ಯಾಸ್ ದರ ಹೆಚ್ಚಳ ಹಿಂದಕ್ಕೆ ಪಡೆಯಲು ಆಗ್ರಹಿಸಿ ತ್ರಿಚಕ್ರ ಚಾಲಕರ ಮತ್ತು ಮಾಲೀಕರ ಸಂಘದ ಮುಖಂಡರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದರು.
ಈ ಹಿಂದೆ ಆಟೋ ಗ್ಯಾಸ್‌ಗೆ 54.40 ರು. ಇತ್ತು. ಈಗ 65.50 ರು.ಗೆ ಪರಿಷ್ಕರಿಸಿರುವುದರಿಂದ ಬಡ ಆಟೋ ಚಾಲಕರು ಮತ್ತು ಮಾಲೀಕರಿಗೆ ಹೊರೆ ಆಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿರುವಾಗ ಕೇಂದ್ರ ಸರ್ಕಾರ ಗ್ಯಾಸ್ ದರವನ್ನು ಏಕಾಏಕಿ ಏರಿಕೆ ಮಾಡಿರುವುದು ಸರಿಯಲ್ಲ. ಆಟೊ ಚಾಲನೆ ಮಾಡಿ ಜೀವನ ನಡೆಸುತ್ತಿರುವ ಆಟೋ ಚಾಲಕರ ಸ್ಥಿತಿ ಶೋಚನೀಯವಾಗಿರುವುದರಿಂದ ಗ್ಯಾಸ್ ದರ ಇಳಿಕೆ ಮಾಡಲೇಬೇಕೆಂದು ಒತ್ತಾಯಿಸಿದರು.
ಮನವಿ ಸ್ಪೀಕರಿಸಿದ ಅಪರ ಜಿಲ್ಲಾಧಿಕಾರಿ ನವೀನ್‌ಕುಮಾರ್ ರಾಜು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಸಂಘದ ಮುಖಂಡರಾದ ಕೆ.ವಿ. ಸುರೇಶ್‌ಕುಮಾರ್, ಬಂಗಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಆರ್. ಸುಬ್ರಮಣಿ, ಅನ್ಸರ್‌ಪಾಷಾ, ಸಿ.ಸುರೇಶ್, ಸಿ.ವಿ. ನಾಗರಾಜ್, ಎಂ. ಶ್ರೀನಿವಾಸ್, ಆರ್. ಮುರಳಿ ಇನ್ನಿತರರು ಪ್ರತಿಭಟನೆಯಲ್ಲಿ ಇದ್ದರು.