ಯುವಕರನ್ನು ಸೆಳೆಯಲು ಬಿಜೆಪಿ ಕ್ರಿಕೆಟ್ ಟೂರ್ನಿ
ಕೋಲಾರ: ಬಿಜೆಪಿಗೆ ಯುವಕರನ್ನು ಸೆಳೆಯುವ ಮೂಲಕ ಭಾರತವನ್ನು ಸದೃಢವಾಗಿ ಕಟ್ಟಬೇಕೆಂಬ ಉದ್ದೇಶದಿಂದ ಜ.11ರಿಂದ 15ರ ವರೆಗೆ ರಾಜ್ಯಾಧ್ಯಂತ ಕ್ರಿಕೆಟ್ ಟೂರ್ನಿ ನಡೆಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಮೋದ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಜ.12ರಂದು ಸ್ವಾಮಿ ವಿವೇಕಾನಂದರ 150 ಜನ್ಮ ದಿನೋತ್ಸವವನ್ನೂ ಆಚರಿಸಲಾಗುತ್ತಿದ್ದು, ಕೇಲೇಗಾ ಯುವ, ಜೀತೇಗಾ ಭಾರತ ಘೋಷಣೆಯಡಿ ನಡೆಯುವ ಕ್ರಿಕೆಟ್ ಪಂದ್ಯಾವಳಿಯನ್ನು ವಿವೇಕಾನಂದರಿಗೆ ಸಮರ್ಪಣೆ ಮಾಡಲಾಗುತ್ತಿದೆ ಎಂದರು.
ಕೋಲಾರ ಜಿಲ್ಲೆಯಿಂದ ಸುಮಾರು 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸುಮಾರು 2 ಸಾವಿರ ಕ್ರಿಕೆಟ್ ಅಭಿಮಾನಿಗಳನ್ನು ಸೇರಿ ಈ ಮೂಲಕ ಯುವಕರನ್ನು ಬಿಜೆಪಿಗೆ ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಿದರು.
ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು 3 ಸಾವಿರ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಮೊದಲ ಬಹುಮಾನ ನೆನಪಿನ ಕಾಣಿಕೆ, 30 ಸಾವಿರ ನಗದು ಹಾಗೂ 2ನೇ ಸ್ಥಾನ 15 ಸಾವಿರ ಬಹುಮಾನ ನೀಡಲಾಗುವುದು ಎಂದು ಹೇಳಿದರು. ಕೋಲಾರದ ಪವನ್ ಕಾಲೇಜಿನ ಆಟದ ಮೈದಾನದಲ್ಲಿ ಟೂರ್ನಿ ನಡೆಯಲಿದೆ.
ಶಾಸಕ ಸಿ.ಟಿ. ರವಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಮುನಿರಾಜು, ಕ್ರಿಕೆಟ್ ಟೂರ್ನಿಯ ರಾಜ್ಯ ಸಂಚಾಲಕ ಹಾಗೂ ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾದ ಓಂಶಕ್ತಿಚಲಪತಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
16ರಂದು ರಾಷ್ಟ್ರಮಟ್ಟದ ಟೂರ್ನಿ: ಟೂರ್ನಿಯಲ್ಲಿ ಗೆದ್ದ ಒಂದು ತಂಡವನ್ನು ರಾಜ್ಯಕ್ಕೆ ಕಳುಹಿಸಲಾಗುತ್ತದೆ. ಜ.16ರೊಳಗೆ ರಾಜ್ಯ ಮಟ್ಟದ ಟೂರ್ನಿ ಮುಗಿಸಿ ಹಿಮಾಚಾಲ ಪ್ರದೇಶದ ಅನುರಾಧ ಸಿಂಗ್ ಠಾಕೂರ್ ಕ್ರೀಡಾಂಗಣದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಟೂರ್ನಿಗೆ ರಾಜ್ಯದಿಂದ ತಂಡವನ್ನು ಕಳುಹಿಸಿಕೊಡಲಾಗುತ್ತದೆ. ಅಲ್ಲಿಗೆ ನರೇಂದ್ರಮೋದಿ ಆಗಮಿಸಿ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆಂದು ವಿವರಿಸಿದರು.
ಕ್ರಿಕೆಟ್‌ಗೆ ಯುವಕರು ಹೆಚ್ಚಿನ ಒಲವು ತೋರುವುದರಿಂದ ಅದೇ ಆಟದ ಮೂಲಕ ಯುವಶಕ್ತಿಯನ್ನು ಬಿಜೆಪಿಗೆ ಸೆಳೆಯಲು ನಿರ್ಧರಿಸಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಪ್ರದೀಪ್, ಗ್ರಾಮಾಂತರ ಉಪಾಧ್ಯಕ್ಷ ನಾಗೇಂದ್ರ ಇದ್ದರು.